ಸಾರಾಂಶ
ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು ಸಮಯ ವ್ಯರ್ಥ ಮಾಡದೇ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಓದಿನಲ್ಲಿ ಹೆಚ್ಚು ಪಾಂಡಿತ್ಯ ಪಡೆದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಸ್ನಾತಕೋತ್ತರ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಆಲೋಚನೆ ಬೆಳೆಸಿಕೊಂಡು ಮುಂದೆ ಸಾಗಬೇಕು.
ಕೊಪ್ಪಳ:
ವಿದ್ಯಾರ್ಥಿಗಳು ಅಂಕಗಳ ಜತೆಗೆ ವಿಷಯವಾರು ಪಾಂಡಿತ್ಯ ಹೊಂದಬೇಕು ಎಂದು ಕೊಪ್ಪಳ ವಿವಿ ಕುಲಪತಿ ಡಾ. ಬಿ.ಕೆ. ರವಿ ಹೇಳಿದರು.ಕುಕನೂರು ತಾಲೂಕಿನ ತಳಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯದ ಕನ್ನಡ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು ಸಮಯ ವ್ಯರ್ಥ ಮಾಡದೇ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಓದಿನಲ್ಲಿ ಹೆಚ್ಚು ಪಾಂಡಿತ್ಯ ಪಡೆದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಸ್ನಾತಕೋತ್ತರ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಆಲೋಚನೆ ಬೆಳೆಸಿಕೊಂಡು ಮುಂದೆ ಸಾಗಬೇಕು. ಪ್ರತಿ ವಿಷಯವು ವಿದ್ಯಾರ್ಥಿಗಳಿಗೆ ಅತ್ಯವಶ್ಯಕ ಪ್ರತಿ ವಿಷಯವನ್ನೂ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ಅಂದಾಗ ಯಾವ ಕ್ಷೇತ್ರದಲ್ಲಾದರೂ ತಮ್ಮ ಪ್ರತಿಭೆ ತೋರಿಸಬಹುದು ಎಂದರು.ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದಿದ್ದು ಪ್ರತಿಯೊಬ್ಬರಿಗೂ ಕಷ್ಟ, ಬಡತನ ಅರಿವಿದೆ. ಅವುಗಳನ್ನು ನಿವಾರಿಸಲು ಶಿಕ್ಷಣ ಅತ್ಯಮೂಲ್ಯ ಅಸ್ತ್ರವಾಗಿದೆ. ಶಿಕ್ಷಣದಲ್ಲಿ ಸಂಪೂರ್ಣ ತೊಡಗುವ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಹೋಗಬೇಕು ಹಾಗೂ ದೇಶದ ಪ್ರತಿಷ್ಠಿತ ಹುದ್ದೆ ಅಲಂಕರಿಸಬೇಕು. ಅಂದಾಗ ಕಲ್ಯಾಣ ಕರ್ನಾಟಕ ಹಾಗೂ ಜಿಲ್ಲೆ, ವಿಶ್ವವಿದ್ಯಾಲಯದ ಕೀರ್ತಿ ಹೆಚ್ಚುಸುತ್ತದೆ ಎಂದರು.
ಕುಲಸಚಿವ ಪ್ರೊ. ಕೆ.ವಿ. ಪ್ರಸಾದ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರಕಾಶ ಯಳವತ್ತಿ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಇದ್ದರು.