ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಏ.16ರಂದು 7 ನಾಮಪತ್ರಗಳ ಸಲ್ಲಿಕೆ

| Published : Apr 17 2024, 01:18 AM IST

ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಏ.16ರಂದು 7 ನಾಮಪತ್ರಗಳ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಾಗರ ಈಶ್ವರ ಖಂಡ್ರೆ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು 3ನೇ ದಿನವಾದ ಮಂಗಳವಾರ ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಾಗರ ಈಶ್ವರ ಖಂಡ್ರೆ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.

ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಾಗರ ಈಶ್ವರ ಖಂಡ್ರೆ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ತಾಯಿ ಗೀತಾ ಖಂಡ್ರೆ, ಸೋದರ ಮಾವ ಗಂಗಾಧರ, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಮುಖಂಡರಾದ ಅಮೃತರಾವ ಚಿಮಕೋಡೆ ಸೇರಿ 5 ಜನರು ಇದ್ದರು.

ಸಾಗರ ಈಶ್ವರ ಖಂಡ್ರೆ ಬುಧವಾರ ಏ. 17ರಂದು ಬೆಳಗ್ಗೆ 11.15ಕ್ಕೆ ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು ಬಸವೇಶ್ವರ ವೃತ್ತದಿಂದ ಬೆಳಗ್ಗೆ 10ಕ್ಕೆ ರ್‍ಯಾಲಿ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಇನ್ನು ಲೋಕಸಭಾ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ವಸೀಮುದ್ದೀನ್‌ ಅಬ್ದುಲ ಖಯೂಮ್‌ ನಾಮಪತ್ರ ಸಲ್ಲಿಸಿದರು. ಬಾಬು ಪಾಶಾ ಮೊಯಿನುದ್ದೀನ್‌ ನ್ಯಾಷನಲ್‌ ಡೆವಲಪಮೆಂಟ್‌ ಪಾರ್ಟಿ ಅಭ್ಯರ್ಥಿಯಾಗಿ, ರಾಮಚಂದ್ರ ನಾರಾಯಣ ಕಚವೆ ಕ್ರಾಂತಿಕಾರಿ ಜೈಹಿಂದ್‌ ಸೇನಾ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಬಿಎಸ್‌ಪಿ ಅಭ್ಯರ್ಥಿಯಾಗಿ ಪುಟ್ಟರಾಜ ಹಣಮಂತ ನಂದಿ ಹಾಗೆಯೇ ಜಯರಾಜ ಕಾಶಪ್ಪ ಬುಕ್ಕ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆಲ್‌ ಇಂಡಿಯಾ ಉಲಮಾ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಮೊಹಮ್ಮದ್‌ ಶಫೀಕ ಉರ್‌ ರಹಮಾನ್‌ ಅವರು ನಾಮಪತ್ರ ಸಲ್ಲಿಸಿದರು.

ಏ.16ರಂದು 7 ನಾಮಪತ್ರಗಳು ಸಲ್ಲಿಕೆಯಾಗಿವೆ. ಏ.19 ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏ.20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ. 22ರಂದು ನಾಮಪತ್ರಗಳ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.