ಕನ್ನಡಪ್ರಭ ವಾರ್ತೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಆಕ್ಷೇಪಣೆಯಲ್ಲಿ ಜೀವಂತ ಮತದಾರರನ್ನು ಮೃತಪಟ್ಟಿದ್ದಾರೆಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ನಕಲಿ ಮರಣ ಪ್ರಮಾಣ ಪತ್ರಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಆಕ್ಷೇಪಣೆಯಲ್ಲಿ ಜೀವಂತ ಮತದಾರರನ್ನು ಮೃತಪಟ್ಟಿದ್ದಾರೆಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ನಕಲಿ ಮರಣ ಪ್ರಮಾಣ ಪತ್ರಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.ಕಾಂಗ್ರೆಸ್ ಮುಖಂಡ ಅಬ್ದುಲಹಮೀದ್ ಮುಶ್ರೀಫ್ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ, 30-ಬಿಜಾಪುರ ನಗರ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೂ ಮನವಿಯ ಪ್ರತಿಗಳನ್ನು ಸಲ್ಲಿಸಲಾಯಿತು.ಮನವಿಯಲ್ಲಿ, ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಲೆಟರ್‌ಹೆಡ್‌ನಲ್ಲಿ ಕೆಲವು ಮತದಾರರು ಮೃತಪಟ್ಟಿದ್ದಾರೆಂದು ಉಲ್ಲೇಖಿಸಿ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಅವುಗಳ ಆಧಾರದ ಮೇಲೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. 8 ಮತದಾರರು ಮೃತಪಟ್ಟಿದ್ದಾರೆಂದು ಪಟ್ಟಿ ಸಲ್ಲಿಸಲಾಗಿದ್ದು, 7 ಮಂದಿಗೆ ಸಂಬಂಧಿಸಿದ ಮರಣ ಪ್ರಮಾಣಪತ್ರಗಳ ಪ್ರತಿಗಳನ್ನು ಕೂಡ ನೀಡಲಾಗಿದೆ. ಆದರೆ, ಕಾಂಗ್ರೆಸ್‌ನ ಬಿಎಲ್‌ಎ-2ಗಳು ಸ್ಥಳೀಯವಾಗಿ ಪರಿಶೀಲಿಸಿದಾಗ, ಆ 7 ಮತದಾರರು ಜೀವಂತವಾಗಿರುವುದು ಕಂಡುಬಂದಿದೆ. ಎದುರಾಳಿಗಳು ಸಲ್ಲಿಸಿರುವ ಮರಣ ಪ್ರಮಾಣಪತ್ರಗಳು ನೈಜವಾಗಿವೆಯೇ?, ಅವುಗಳನ್ನು ಯಾವ ದಾಖಲೆಗಳ ಆಧಾರದ ಮೇಲೆ ನೀಡಲಾಗಿದೆ ಹಾಗೂ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ನಗರ ಕ್ಷೇತ್ರದ 198 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸುಮಾರು 1,046 ಅಲ್ಪಸಂಖ್ಯಾತ ಸಮುದಾಯದ ಮತದಾರರು ಮೃತಪಟ್ಟಿದ್ದಾರೆಂದು ತೋರಿಸಿ ಕೆಲ ವಿರೋಧಿಗಳು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಪ್ರಯತ್ನಿಸಿದ್ದಾರೆ. ಈ ಸಂಬಂಧದ ದಾಖಲೆಗಳನ್ನು ಚುನಾವಣಾ ಅಧಿಕಾರಿಗಳು ಬಿಎಲ್‌ಒಗಳಿಗೆ ಪರಿಶೀಲನೆಗಾಗಿ ಕಳುಹಿಸಿದ್ದು, ಸ್ಥಳೀಯ ಪರಿಶೀಲನೆಯಲ್ಲಿ ಹಲವು ಮತದಾರರು ಜೀವಂತವಾಗಿರುವುದು ಕಂಡುಬಂದಿದೆ. ಫಾರಂ-7 ಮೂಲಕ ಮತದಾರರ ಹೆಸರು ತೆಗೆದುಹಾಕುವ ಸಂದರ್ಭದಲ್ಲಿ ಸೂಕ್ತ ದಾಖಲೆ ಹಾಗೂ ಪುರಾವೆಗಳನ್ನು ಸಲ್ಲಿಸುವ ಜವಾಬ್ದಾರಿ ಅರ್ಜಿದಾರರ ಮೇಲಿದ್ದು, ತಪ್ಪು ಘೋಷಣೆ ನೀಡುವುದು ಕಾನೂನುಬದ್ಧವಾಗಿ ಶಿಕ್ಷಾರ್ಹವಾಗಬಹುದು. ಹೀಗಾಗಿ ಸಲ್ಲಿಸಲಾದ ಮರಣ ಪ್ರಮಾಣಪತ್ರಗಳು ಹಾಗೂ ಇತರ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ತಪ್ಪು ದಾಖಲೆ ಅಥವಾ ಸುಳ್ಳು ಮಾಹಿತಿ ಬಳಕೆ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಚುನಾವಣಾ ಕಾನೂನು ಹಾಗೂ ಅನ್ವಯವಾಗುವ ಇತರ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು. ಜೊತೆಗೆ, ಯಾವುದೇ ಅರ್ಹ ಹಾಗೂ ಜೀವಂತ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕದಂತೆ ಮನವಿಯಲ್ಲಿ ಕೋರಲಾಗಿದೆ.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಇರಫಾನ್ ಶೇಖ, ಅಬ್ದುಲರಜಾಕ್ ಹೊರ್ತಿ, ವೈಜನಾಥ ಕರ್ಪೂರಮಠ, ಶಕೀಲ್ ಬಾಗಮಾರೆ, ಎಸ್.ಎಂ.ಪಾಟೀಲ ಗಣಿಹಾರ, ಮಹಾದೇವಿ ಗೋಕಾಕ, ಫಯಾಜ ಕಲಾದಗಿ, ಎಂ.ಸಿ.ಮುಲ್ಲಾ, ರಾಜು ಚವ್ಹಾಣ, ಶಫೀಕ್ ಮನಗೂಳಿ, ಆಸೀಫುಲ್ಲಾ ಖಾದ್ರಿ, ಹಮೀದಾ ಪಟೇಲ್, ಸರಿತಾ ನಾಯಕ, ಭಾರತಿ ನಾವಿ, ಸವಿತಾ ಧನರಾಜ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.