ಸಾರಾಂಶ
ಪಾಂಡವಪುರ ಉಪ ವಿಭಾಗಕ್ಕೆ ನೂತನ ಉಪ ವಿಭಾಗಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಕಳೆದ ಶುಕ್ರವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ಕಡತ ವಿಲೇವಾರಿ ಹಮ್ಮಿಕೊಂಡಿದ್ದರು. ಈ ವೇಳೆ ಅಂಧ ದೇವರಾಜು ಎಸಿ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಆದೇಶದ ಮೇರೆಗೆ ತಾಲೂಕಿನ ಕಿಕ್ಕೇರಿ ಹೋಬಳಿ ಚೌಡೇನಹಳ್ಳಿ ಗ್ರಾಪಂ ವ್ಯಾಪ್ತಿ ರಾಮೇನಹಳ್ಳಿ ಅಂಧರ ಕುಟುಂಬಕ್ಕೆ ತಿದ್ದುಪಡಿ ಮಾಡಿದ ಪಹಣಿಯನ್ನು ಗ್ರಾಮ ಆಡಳಿತಾಧಿಕಾರಿ ಅರ್ಪಿತ ತಲುಪಿಸಿದರು.ರಾಮೇನಹಳ್ಳಿಯ ಅಂಧ ದೇವರಾಜು ಅವರಿಗೆ ಗ್ರಾಮದ ಸರ್ವೆ ನಂ 28ರಲ್ಲಿ 32 ಗುಂಟೆ ಕೃಷಿ ಭೂಮಿ ಇತ್ತು. ಕಂದಾಯ ಇಲಾಖೆ ಕೈತಪ್ಪಿನಿಂದ 1972 ರಿಂದಲೂ ದೇವರಾಜು ಅವರ ಹೆಸರು ಪಹಣಿಯಲ್ಲಿ (ಆರ್.ಟಿ.ಸಿ) ಕೈಬಿಟ್ಟು ಹೋಗಿತ್ತು. ಪಹಣಿಯಲ್ಲಿ ಕೈಬಿಟ್ಟು ಹೋಗಿರುವ ತಮ್ಮ ಹೆಸರಿನ ಆರ್.ಟಿ.ಸಿ ಪಡೆಯಲು ಕಣ್ಣು ಕಾಣದ ಅಂಧ ದೇವರಾಜು ತಾಲೂಕು ಕಚೇರಿಗೆ ಸುತ್ತಿ ಸುತ್ತಿ ಬೆಂಡಾಗಿ ಹೋಗಿದ್ದರು.
ಪಾಂಡವಪುರ ಉಪ ವಿಭಾಗಕ್ಕೆ ನೂತನ ಉಪ ವಿಭಾಗಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಕಳೆದ ಶುಕ್ರವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ಕಡತ ವಿಲೇವಾರಿ ಹಮ್ಮಿಕೊಂಡಿದ್ದರು. ಈ ವೇಳೆ ಅಂಧ ದೇವರಾಜು ಎಸಿ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು.ಅಂಧ ರೈತ ದೇವರಾಜು ಅವರ ಸಮಸ್ಯೆ ಆಲಿಸಿದ ಡಾ.ಶ್ರೀನಿವಾಸ್ ಸ್ಥಳದಲ್ಲಿದ್ದ ಕಿಕ್ಕೇರಿ ನಾಡ ಕಚೇರಿ ಉಪ ತಹಸೀಲ್ದಾರ್ ಲಕ್ಷ್ಮೀಕಾಂತ್ ಅವರಿಗೆ ಪಹಣಿ ದೋಷ ಸರಿಪಡಿಸಿ ರೈತನ ಮನೆ ಬಾಗಿಲಿಗೆ ತಲುಪಿಸುವಂತೆ ಆದೇಶಿಸಿದ್ದರು.
ಉಪ ವಿಭಾಗಧಿಕಾರಿಗಳ ಆದೇಶದಂತೆ ಅಂಧ ರೈತ ದೇವರಾಜು ಅವರ ಕಡತ ಪರಿಶೀಲನೆ ಮಾಡಿದ ಕಂದಾಯ ಇಲಾಖೆ ಅಧಿಕಾರಿಗಳು ಪಹಣಿನ ಲೋಪವನ್ನು ಸರಿಪಡಿಸಿ ತಿದುಪಡಿಯಾದ ಆರ್ ಟಿಸಿ ಯನ್ನು ಗ್ರಾಮ ಆಡಳಿತಧಿಕಾರಿ ಅರ್ಪಿತ ಅವರ ಮೂಲಕ ರೈತ ದೇವರಾಜು ಅವರ ಮನೆ ಬಾಗಿಲಿಗೆ ಹೋಗಿ ತಲುಪಿಸಿದರು.ಹಲವು ದಶಕಗಳ ಸಮಸ್ಯೆಯನ್ನು ಸರಿಪಡಿಸಿಕೊಟ್ಟ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಉಪ ತಹಸೀಲ್ದಾರ್ ಲಕ್ಷ್ಮೀಕಾಂತ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗೆ ರೈತ ದೇವರಾಜು ಕೃತಜ್ಞತೆ ಸಲ್ಲಿಸಿದ್ದಾರೆ.