ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ರೈತರ ಹಕ್ಕು ಒತ್ತಾಯ ಪತ್ರವನ್ನು ಜು. 5ರಂದು ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ರಾಜ್ಯದ ನೂತನ ಸಂಸತ್ ಸದಸ್ಯರುಗಳಿಗೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹಕ್ಕು ಒತ್ತಾಯಗಳನ್ನು ಸಲ್ಲಿಸುತ್ತಿದ್ದು ಸಂಸತ್ತಿನಲ್ಲಿ ಮತ್ತು ಸಂಬಂಧಪಟ್ಟಂತಹ ಮಂತ್ರಿಗಳಿಗೆ ಜೊತೆ ಪತ್ರ ವ್ಯವಹಾರ ನಡೆಸಿ ಪ್ರಧಾನ ಮಂತ್ರಿಗಳ ಗಮನ ಸೆಳೆದು ರೈತರ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿ ಟನ್ ಕಬ್ಬಿಗೆ ನಾಲ್ಕು ಸಾವಿರ ನಿಗದಿ ಮಾಡಬೇಕು ಹಾಗೂ ಕಬ್ಬಿನ ಇಳುವರಿಯನ್ನು ಕೇಂದ್ರ ಸರ್ಕಾರ ಕಾರ್ಖಾನೆಗಳಿಗೆ 8.5% ನಿಗದಿ ಮಾಡಬೇಕು, ಈಗಾಗಲೇ 10.5% ಗೆ 3400 ದರ ನಿಗದಿ ಮಾಡಿ ಆದೇಶ ನೀಡಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ ಆದ್ದರಿಂದ ತಕ್ಷಣ ಈ ಮಾನದಂಡವನ್ನು ಬದಲಿಸಬೇಕು, ಎಫ್ ಆರ್ ಪಿ ಹಾಗೂ ಎಂಎಸ್‌ಪಿ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು. ಎಂಎಸ್‌ಪಿ ಕಾನೂನು ಖಾತ್ರಿ ಎಲ್ಲ ಬೆಳೆಗಳಿಗೆ ಜಾರಿಯಾಗಬೇಕು, ಅಕ್ರಮ ಸಕ್ರಮ ಯೋಜನೆ ಮರು ಜಾರಿ ಆಗಬೇಕು ಹಾಗೂ ಸೋಲಾರ್ ಪಂಪುಗಳನ್ನು ರೈತರು ಅಳವಡಿಸಿಕೊಂಡರೆ ಯೋಜನೆ ವೆಚ್ಚದ 90ರಷ್ಟು ಸಹಾಯಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು ಎಂದರು.ಕೇಂದ್ರ ಸರ್ಕಾರ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕು, ತೆಲಂಗಾಣ ಸರ್ಕಾರವು ರೈತರ ಕೃಷಿ ಸಾಲವನ್ನು 2, ಲಕ್ಷದ ವರೆಗೆ ಸಾಲವನ್ನು ಮನ್ನಾ ಮಾಡಿದೆ ಹಾಗೂ ರೈತರಿಗೆ ಪ್ರತಿ ಎಕರೆ ಪ್ರದೇಶಕ್ಕೆ 15 ಸಾವಿರ ರು. ಪ್ರೋತ್ಸಾಹ ಧನ ನೀಡುತ್ತಿದೆ. ಕೇಂದ್ರ ಸರ್ಕಾರವು ಬಂಡವಾಳ ಶಾಹಿಗಳು ಮತ್ತು ಶ್ರೀಮಂತರ 14 ಲಕ್ಷ ಕೋಟಿ ಸಾಲವನ್ನು ಎನ್‌ಪಿಎ ಎಂದು ಪೋಷಿಸಿ ಮನ್ನಾ ಮಾಡಿದೆ ಅದೇ ರೀತಿ ರೈತರ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಎಲ್ಲಾ ಬೆಳೆಗಳಿಗೂ ಖರೀದಿ ಕೇಂದ್ರಗಳನ್ನು ವರ್ಷಪೂರ್ತಿ ತೆರೆಯಬೇಕು. ಯಾವುದೇ ನಿರ್ಬಂಧ ಗಳಿಲ್ಲದೆ ಷರತ್ತುಗಳಿಲ್ಲದೆ ಖರೀದಿ ಮಾಡಿ ನಾಗರಿಕ ಸರಬರಾಜು ಮೂಲಕ ವಿತರಿಸಲು ಕ್ರಮ ಕೈಗೊಳ್ಳಬೇಕು, ಓರಿಸ್ಸಾ ಮತ್ತು ಛತ್ತಿಸಗಡ್ ರಾಜ್ಯಗಳಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ 3,100 ರೂಪಾಯಿಗಳನ್ನು ನಿಗದಿ ಮಾಡಲು ಆದೇಶ ನೀಡಿವೆ. ಆದರೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಗೆ 2,300 ಅನ್ನು ನಿಗದಿ ಮಾಡಿದೆ ಇದು ರೈತರಿಗೆ ತೊಂದರೆಯಾಗಿದೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.ಬೆಳೆ ವಿಮೆಯನ್ನು ರೈತನ ಹೊಲದಲ್ಲಿನ ವೈಯಕ್ತಿಕ ವಿಮೆ ರೀತಿ ಪರಿಗಣಿಸಿ ನಷ್ಟ ಪರಿಹಾರವನ್ನು ಪರಿಗಣಿಸಬೇಕು. ಕೊಬ್ಬರಿ ಬೆಂಬಲ ಬೆಲೆಗೆ ಹೆಚ್ಚಳ ಮಾಡಬೇಕು ಎಂದರು.ನಾಳೆ ಸಂಘದ ಕಚೇರಿ ಉದ್ಘಾಟನೆ:
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ವಿಭಾಗೀಯ ಮಟ್ಟದ ರೈತರ ತಾಂತ್ರಿಕ ಮತ್ತು ಅಧ್ಯಯನ ಶಿಬಿರ ಮತ್ತು ಸಂಘದ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ಜು.3ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ನಗರದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ನೆರವೇರಿಸಲಿದ್ದಾರೆ. ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ತೇಜಸ್ವಿ ಪಟೇಲ್ ಅಧ್ಯಕ್ಷತೆ ವಹಿಸಲಿದ್ದು, ಪ್ರಾಸ್ತಾವಿಕವಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಲಿದ್ದಾರೆ. ಶಿಬಿರದಲ್ಲಿ ರೈತ ಉತ್ಪಾದಕ ಸಂಘಗಳ ಪಾತ್ರ ಮತ್ತು ಮಹತ್ವ ಕುರಿತು ಕೊಡಗು ವಿಶ್ವವಿದ್ಯಾಲಯ ಉಪ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ವಿಷಯ ಮಂಡನೆ ಮಾಡಲಿದ್ದಾರೆ. ಕಬ್ಬು ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ಕುರಿತು ಬೆಂಗಳೂರು ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಸಂಸ್ಥೆ ನಿರ್ದೇಶಕ ಖಂಡಗಾವಿ ವಿಷಯ ಮಂಡನೆ ಮಾಡಲಿದ್ದಾರೆ. ಇಲಾಖೆಯ ಸೌಲಭ್ಯ ಮತ್ತು ಕಾರ್ಯಕ್ರಮಗಳ ಬಗ್ಗೆ ಕುರಿತು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ ನಾಗರಾಜ್ ಅವರು ವಿಷಯ ಮಂಡನೆ ಮಾಡಲಿದ್ದು, ಅರಿಶಿಣ ಬೆಳೆಯ ಬಗ್ಗೆ ಸಮಗ್ರ ಮಾಹಿತಿ ಕುರಿತು ಹಿರಿಯ ವಿಜ್ಞಾನಿ ಸಿದ್ದಪ್ಪ ವಿಷಯ ಮಂಡನೆ ಮಾಡಲಿದ್ದಾರೆ ಎಂದರು. ಕ.ರಾ.ಕ.ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠಲ ಬಿ ಗಣಾಚಾರಿ, ರಾಜ್ಯ ಗೌರವಾಧ್ಯಕ್ಷ ಆಲತ್ತೂರು ಗೌ.ಸಿದ್ದಲಿಂಗಪ್ಪ, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ವರ್ಷ ಉಮ್ಮತ್ತೂರು ಅವರು ಕಚೇರಿ ನಾಮಫಲಕ ಉದ್ಘಾಟನೆ ಮಾಡಲಿದ್ದಾರೆ. ಸಮಗ್ರ ಕೃಷಿಯಲ್ಲಿ ಪ್ರಗತಿಪರ ರೈತ ಮುದ್ದಹಳ್ಳಿ ಚಿಕ್ಕಸ್ವಾಮಿ ಅವರು ಪ್ರಗತಿಪರ ರೈತರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ನಾಗರಾಜು, ಹಾಡ್ಯ ರವಿ, ಮಹೇಂದ್ರ, ಅರಳಿಕಟ್ಟೆ ಕುಮಾರ್, ಮೋಹನ್, ಸೋಮೇಶ್ ಇದ್ದರು.