ಸಾರಾಂಶ
ಈ ಇಬ್ಬರು ನಾಯಕರು ಬಳ್ಳಾರಿಯ ಅಧಿದೇವತೆ ಶ್ರೀಕನಕ ದುರ್ಗಮ್ಮದೇವಿಗೆ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಉಮೇದುವಾರಿಕೆ ಸಲ್ಲಿಸುವರು.
ಬಳ್ಳಾರಿ: ಇಲ್ಲಿನ ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆಗೆ ಏ.12ರಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಇಬ್ಬರು ನಾಯಕರು ಬಳ್ಳಾರಿಯ ಅಧಿದೇವತೆ ಶ್ರೀಕನಕ ದುರ್ಗಮ್ಮದೇವಿಗೆ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಉಮೇದುವಾರಿಕೆ ಸಲ್ಲಿಸುವರು.ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಬಸವನಗೌಡ ಪಾಟೀಲ್ ಯತ್ನಾಳ್, ಜೆಡಿಎಸ್ ಶಾಸಕ ನೇಮಿರಾಜ ನಾಯ್ಕ, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಸಚಿವ ಆನಂದಸಿಂಗ್, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಲಕ್ಷ್ಮಿ ಅರುಣಾ, ಮಾಜಿ ಸಂಸದ ವೈ.ದೇವೇಂದ್ರಪ್ಪ ಸೇರಿದಂತೆ ಪಕ್ಷದ ಅನೇಕ ಮುಖಂಡರು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಕ್ಷದ ಹಿರಿಯ ಮುಖಂಡ ಎಚ್.ಕೆ.ಪಾಟೀಲ್, ಜಮೀರ್ ಅಹ್ಮದ್ ಅನೇಕ ನಾಯಕರು ಭಾಗವಹಿಸಲಿದ್ದಾರೆ.ಡಿಸಿ ಕಚೇರಿ ಸುತ್ತ ನಿಷೇಧಾಜ್ಞೆ:
ಬಳ್ಳಾರಿ ಲೋಕಸಭೆ ಚುನಾವಣೆಗೆ ಏ.12ರಿಂದ 19ರವರೆಗೆ ಉಮೇದುವಾರರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆಯಾಗಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶಿಸಿದ್ದಾರೆ.ನಾಮಪತ್ರ ಸಲ್ಲಿಕೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಸಂಭವವಿರುವುದರಿಂದ ಸೂಕ್ತ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.