ಮೆಂದರೆ ಗ್ರಾಮ ಸ್ಥಳಾಂತರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಕೆ: ಡಿಸಿ

| Published : Jun 12 2024, 12:31 AM IST

ಮೆಂದರೆ ಗ್ರಾಮ ಸ್ಥಳಾಂತರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಕೆ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಏಪ್ರಿಲ್ 26ರಂದು ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸಗೊಳಿಸಿ ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದರಿಂದ ಚುನಾವಣೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಘಟನೆಯ ಬಗ್ಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಮೆಂದರೆ ಗ್ರಾಮವನ್ನು ಸ್ಥಳಾಂತರ ಮಾಡಲು ಸರ್ವೆ ಕಾರ್ಯ ಮುಗಿದಿದ್ದು ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಗ್ರಾಮಕ್ಕೆ ಭೇಟಿ ನೀಡಿ ನಿವಾಸಿಗಳ ಕುಂದುಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.ಮೆಂದರೆ ಗ್ರಾಮವನ್ನು ಪಾಲಾರ್ ಗ್ರಾಮಕ್ಕೆ ಸ್ಥಳಾಂತರ ಮಾಡುವಂತೆ ಸ್ಥಳೀಯ ಮುಖಂಡರಿಂದ ಸಚಿವರಿಗೆ ಮನವಿ ಮಾಡಿದಾಗ ಸ್ಥಳದಲ್ಲಿ ಇದ್ದ ಜಿಲ್ಲಾಧಿಕಾರಿ ಶಿಲ್ಪನಾಗ್ ಕ್ರಮಕೈಗೊಂಡಿರುವ ವರದಿಯ ಬಗ್ಗೆ ವಿವರಣೆ ನೀಡಿ ಪಾಲಾರ್ ಜಾಗದಲ್ಲಿ ಸ್ಥಳ ಅಭಾವ ಇರುವುದರಿಂದ ಬಂಡಳ್ಳಿ ಸಮೀಪ ಸ್ಥಳ ಪರಿಶೀಲನೆ ಮಾಡಿ ಸರ್ವೆ ಕಾರ್ಯ ಮಾಡಲು ಕ್ರಮವಹಿಸಲಾಗಿದೆ. ಮೆಂದರೆ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಿಶೇಷ ಪ್ರಕರಣ ಪರಿಗಣಿಸಲು ಸಾಧ್ಯವಿಲ್ಲ: ಏಪ್ರಿಲ್ 26ರಂದು ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸಗೊಳಿಸಿ ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದರಿಂದ ಚುನಾವಣೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಘಟನೆಯ ಬಗ್ಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.ಮತಗಟ್ಟೆ ಧ್ವಂಸ ಮಾಡಬಾರದಿತ್ತು

ಸಚಿವ ಮಹಾದೇವಪ್ಪ ಮಾತನಾಡಿ, ಚುನಾವಣೆ ಬಹಿಷ್ಕಾರ ಮಾಡಿ ಮತದಾನ ವೇಳೆಯಲ್ಲಿ ನಡೆದ ಮತಗಟ್ಟೆ ಧ್ವಂಸ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ಮಾಡಬಾರದಿತ್ತು. ಕಾನೂನು ಕೈಗೆತ್ತಿಕೊಳ್ಳಬಾರದಿತ್ತು. ಚುನಾವಣೆ ಬಹಿಷ್ಕರಿಸಿದರೆ ಗ್ರಾಮಕ್ಕೆ ಸೌಲಭ್ಯ ನೀಡುವವರು ಯಾರು? ಹೀಗಾಗಿ ನೀವು ಮತದಾನ ಮಾಡಬೇಕಾಗಿತ್ತು. ಅದು ನಿಮ್ಮ ಹಕ್ಕು. ಹೀಗಾಗಿ ಗ್ರಾಮದಲ್ಲಿ ನಡೆದಿರುವ ಘಟನೆ ರಾಷ್ಟ್ರ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದೆ. ಇಡೀ ದೇಶವೇ ತಿರುಗಿ ನೋಡುವಂತಹ ಘಟನೆ ನಡೆದಿರುವುದರಿಂದ ಗ್ರಾಮಕ್ಕೆ ಮೂಲಭೂತ ಸೌಲಭ್ಯ ನೀಡಿಲ್ಲ ಎಂದು ನಡೆದಿರುವ ಗಲಭೆಯಿಂದ ಹಲವರ ಮೇಲೆ ಪ್ರಕರಣ ದಾಖಲಾಗಿದೆ ಘಟನೆಗೆ ಪ್ರೇರಣೆ ಯಾರು ಎಂದು ಪ್ರಶ್ನಿಸಿದರು.ಮಹಿಳೆ ಮುಕ್ತಿಗೊಳಿಸಲು ಮನವಿ: ಮತದಾನ ವೇಳೆ ನಮಗೆ ತಿಳಿಯದೆ ನಡೆದಿರುವ ಘಟನೆಯಿಂದ ನಮ್ಮ ಗ್ರಾಮದ ಹಲವರ ಮೇಲೆ ಪ್ರಕರಣ ದಾಖಲಾಗಿದೆ. ಗ್ರಾಮದ ಮಹಿಳೆ ಪ್ರಕರಣದಿಂದ ಮುಕ್ತಿಗೊಳಿಸಿ, ಇದರಿಂದ ನಮ್ಮನ್ನು ಪಾರು ಮಾಡಿ ನಮಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ಕ್ರಮ ಕೈಗೊಳ್ಳುವಂತೆ ಸಚಿವರು ಮನವಿ ಮಾಡಿದರು.