ಒತ್ತುವರಿ ತೆರವು, ನಾಲೆ ಕಾಮಗಾರಿ, ರಸ್ತೆಗೆ ಜಾಗ ಬಿಡುಗಡೆಗಾಗಿ ಸಚಿವರಿಗೆ ಮನವಿ ಸಲ್ಲಿಕೆ

| Published : Nov 18 2024, 12:00 AM IST

ಒತ್ತುವರಿ ತೆರವು, ನಾಲೆ ಕಾಮಗಾರಿ, ರಸ್ತೆಗೆ ಜಾಗ ಬಿಡುಗಡೆಗಾಗಿ ಸಚಿವರಿಗೆ ಮನವಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ತೇಗನಹಳ್ಳಿಯ ಚಿಕ್ಕಕೆರೆಯನ್ನು ಪಿ.ಕೆ.ಜಯಕೃಷ್ಣೇಗೌಡ ಎನ್ನುವ ಪ್ರಭಾವಿ ಗುತ್ತಿಗೆದಾರರ ಕುಟುಂಬದವರು ಅತಿಕ್ರಮಿಸಿ ವಶಪಡಿಸಿಕೊಂಡು ತಮ್ಮ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಸರ್ಕಾರಿ ಕೆರೆಯಲ್ಲಿ ರೆಸಾರ್ಟ್ ಮಾದರಿ ಕಟ್ಟಡ ನಿರ್ಮಿಸಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಸಾರ್ವಜನಿಕರು ವಿವಿಧ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು.

ಹೇಮಾವತಿ ಎಡದಂಡೆ ನಾಲೆ ಸರಪಳಿ 64ನೇ ವಿತರಣಾ ನಾಲೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ನಾಲೆ ಆಧುನೀಕರಣ ಮಾಡಿಸುವಂತೆ ರೈತ ಮುಖಂಡ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ತಾಲೂಕು ರೈತಸಂಘದ ಮುಖಂಡರು ಸಚಿವರಿಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

16,020 ಎಕರೆ ಅಚ್ಚಕಟ್ಟು ಪ್ರದೇಶ ಹೊಂದಿದ್ದು, 1984-85 ಪೂರ್ಣಗೊಂಡ ನಾಲೆಯನ್ನು ಇದುವರೆಗೂ ಆಧುನೀಕರಣ ಮಾಡದಿರುವುದರಿಂದ ಅಚ್ಚಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ತಕ್ಷಣವೇ ಕಾಮಗಾರಿಗೆ ಅಗತ್ಯ ಅನುದಾನ ನೀಡಿ ರೈತರ ನೆರವಿಗೆ ನಿಲ್ಲುವಂತೆ ಒತ್ತಾಯಿಸಿದರು.

ಒತ್ತುವರಿ ತೆರವುಗೊಳಿಸಿ:

ಪಟ್ಟಣದ ತೇಗನಹಳ್ಳಿಯ ಚಿಕ್ಕಕೆರೆಯನ್ನು ಪಿ.ಕೆ.ಜಯಕೃಷ್ಣೇಗೌಡ ಎನ್ನುವ ಪ್ರಭಾವಿ ಗುತ್ತಿಗೆದಾರರ ಕುಟುಂಬದವರು ಅತಿಕ್ರಮಿಸಿ ವಶಪಡಿಸಿಕೊಂಡು ತಮ್ಮ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಸರ್ಕಾರಿ ಕೆರೆಯಲ್ಲಿ ರೆಸಾರ್ಟ್ ಮಾದರಿ ಕಟ್ಟಡ ನಿರ್ಮಿಸಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಬಗ್ಗೆ ರಾಜ್ಯ ರೈತಸಂಘ ಹಲವು ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಸಾರ್ವಜನಿಕ ಕೆರೆಯನ್ನು ಖಾಸಗಿ ವ್ಯಕ್ತಿಯಿಂದ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸವಂತೆ ರೈತ ಮುಖಂಡರು ಒತ್ತಾಯಿಸಿದರು.

ಹೇಮಾವತಿ ಎಡದಂಡೆ ನಾಲೆಯ 54ನೇ ವಿತರಣಾ ನಾಲೆ ಅಧುನೀಕರಣ ಕಾಮಗಾರಿ ಕೈಗೊಳ್ಳದಿದ್ದರೂ ಗುತ್ತಿಗೆದಾರನಿಗೆ ಮುಂಗಡವಾಗಿ ಬಿಲ್ ಪಾವತಿಸಲಾಗಿದೆ. ಗುತ್ತಿಗೆದಾರ ಇದುವರೆಗೂ ಶೇ.10 ರಿಂ 20 ರಷ್ಟು ಮಾತ್ರ ಕಾಮಗಾರಿ ಮಾಡಿದ್ದು ವಿಳಂಭ ಕಾಮಗಾರಿಯಿಂದ ರೈತರು ಬೆಳೆ ಬೆಳೆಯದೆ ನಷ್ಟಕ್ಕೆ ಸಿಲುಕಿದ್ದಾರೆ. ಆದರೂ ಬಿಲ್ ಪಾವತಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಆಗ್ರಹಿಸಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆ ಆವರಣದಲ್ಲಿನ ಸಾರ್ವಜನಿಕ ರಸ್ತೆಯನ್ನು ಮುಚ್ಚಿದ್ದಾರೆ. ಹೀಗಾಗಿ ಕೃಷಿ ಜಮೀನು ಹೊಂದಿರುವ ನೂರಾರು ರೈತರ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ಶವ ಸಂಸ್ಕಾರ ಮಾಡಲು ತೊಂದರೆಯಾಗಿದೆ. ಹಳೆ ರಸ್ತೆ ಬಿಡಿಸಿಕೊಡಿ ಅಥವಾ ಪಾಲಿಟೆಕ್ನಿಕ್ ಆವರಣದೊಳಗೆ ಬಸ್ ಡಿಪೋಗೆ ಪಕ್ಕಕ್ಕೆ ಹೊಂದಿಕೊಂಡಂತೆ ತಾಲೂಕು ಆಡಳಿತ ಗುರುತಿಸಿರುವ ಹೊಸ ರಸ್ತೆಯನ್ನಾದರೂ ಬಿಡಿಸುವಂತೆ ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ವರ್ಗದ ಮುಖಂಡರು ಸಚಿವರಿಗೆ ಅಹವಾಲು ಸಲ್ಲಿಸಿದರು.

ಪಟ್ಟಣದ ಹೊರ ವಲಯದ ಸರ್ವೇ ನಂ.287ರಲ್ಲಿ ನಿವೇಶನಕ್ಕಾಗಿ ಹಣ ಕಟ್ಟಿ ಪಟ್ಟಣದ ಬಡವರು ಸೂರು ಕಟ್ಟಿಕೊಳ್ಳಲು ಕಾಯುತ್ತಿದ್ದಾರೆ. ಈ ಜಮೀನನ್ನು ಪುರಸಭೆಗೆ ಹಸ್ತಂತರಿಸಿ ಬಡವರಿಗೆ ಆಸರೆಯಾಗಲು ಅನುಕೂಲ ಮಾಡಿಕೊಡುವಂತೆ ಪುರಸಭಾ ಸದಸ್ಯರಾದ ಕೆ.ಆರ್.ರವೀಂದ್ರಬಾಬು, ಕೆ.ಬಿ.ಮಹೇಶ್ ಮತ್ತಿತರರು ಕೋರಿದರು.

ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯ ಜಾಗ ಒದಗಿಸಿಕೊಡುವಂತೆ ಕಾಂಗ್ರೆಸ್ ಮುಖಂಡ ಬಸ್ತಿ ರಂಗಪ್ಪ ಮನವಿ ಮಾಡಿದರು. ಹೇಮಾವತಿ ಕಚೇರಿ ವೃತ್ತದಲ್ಲಿ ಪ್ರಯಣಿಕರ ಬಸ್ ತಂಗುದಾಣ ಇಲ್ಲ. ಈ ವೃತ್ತದಿಂದ ನೆರೆಯ ಕಿಕ್ಕೇರಿ, ಚನ್ನರಾಯಪಟ್ಟಣ, ಹೊಳೇನರಸಿಪುರ, ಅರಸೀಕೆರೆ, ಶಿವಮೋಗ್ಗ ಮುಂತಾದ ಕಡೆಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಮಳೆ ಬಿಸಿನಲ್ಲಿಯೇ ಕಾದು ನಿಂತು ಬಸ್ ಹತ್ತಬೇಕಾಗಿದೆ. ಕೂಡಲೇ ಬಸ್ ತಂಗುದಾಣ ನಿರ್ಮಿಸುವಂತೆ ಹೇಮಾವತಿ ಮತ್ತು ಬಸವೇಶ್ವರ ಬಡಾವಣೆಯ ನಿವಸಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

ಸಾರ್ವಜನಿಕ ಸಮಸ್ಯೆಗಳಲ್ಲದೆ ವಿವಿಧ ಇಲಾಖೆಗಳಿಲ್ಲಿನ ತಮ್ಮ ತಮ್ಮ ವೈಯಕ್ತಿಕ ಸಮಸ್ಯೆಗಳ ಬಗ್ಗೆಯೂ ನೂರಾರು ಜನ ಸಚಿವರಿಗೆ ಅಹವಾಲು ಸಲ್ಲಿಸಿದರು. ಈ ವೇಳೆ ತಹಸೀಲ್ದಾರ್ ಎಸ್.ಯು.ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮುಖಂಡರಾದ ವಿಜಯ ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಪುರಸಭೆ ಅಧ್ಯಕ್ಷ ಪಂಕಜ ಪ್ರಕಾಶ್, ಎಲ್.ಪಿ.ನಂಜಪ್ಪ, ತಾಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ರೈತ ಮುಖಂಡರಾದ ಮುದುಗೆರೆ ರಾಜೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.