ಜಗದೀಶ್ ಅವರ ಫಾರ್ಮ್‌ನಲ್ಲಿ ವಿವಿಧ ತಳಿಯ ಮೇಕೆಗಳಿರುವ ಕುರಿತು ಮಾಹಿತಿ ಪಡೆದ ಅವರು, ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಾ ಲಾಭದ ಹಾದಿಯಲ್ಲಿ ಮುನ್ನಡೆದಿರುವ ಜಗದೀಶ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಗದೀಶ್ ಅವರ ನಡೆ ಇತರ ಕೃಷಿಕರಿಗೂ ಸ್ಫೂರ್ತಿದಾಯಕವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವ-ಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಲು ಉತ್ತೇಜಿಸುವ ಸಲುವಾಗಿ ಕುಕ್ಕುಟ ಸಂಜೀವಿನಿ ಯೋಜನೆಯಡಿ ಸೌಲಭ್ಯ ಪಡೆಯಲು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಹೇಳಿದರು.

ಮಂಗಳವಾರ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಲಾಭ ಪಡೆದು ಮೇಕೆ ಮತ್ತು ಕೋಳಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡ ಮದ್ದೂರು ತಾಲೂಕಿನ ತೈಲೂರು ಗ್ರಾಮದ ಕೃಷಿಕ ಜಗದೀಶ್ ಅವರ ಗೌರಮ್ಮ ನಾಟಿ ಮೇಕೆ ಫಾರ್ಮ್‌ಗೆ ಭೇಟಿ ನೀಡಿದರು.

ಜಗದೀಶ್ ಅವರ ಫಾರ್ಮ್‌ನಲ್ಲಿ ವಿವಿಧ ತಳಿಯ ಮೇಕೆಗಳಿರುವ ಕುರಿತು ಮಾಹಿತಿ ಪಡೆದ ಅವರು, ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಾ ಲಾಭದ ಹಾದಿಯಲ್ಲಿ ಮುನ್ನಡೆದಿರುವ ಜಗದೀಶ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಗದೀಶ್ ಅವರ ನಡೆ ಇತರ ಕೃಷಿಕರಿಗೂ ಸ್ಫೂರ್ತಿದಾಯಕವಾಗಿದೆ ಎಂದರು.

ಕುಕ್ಕುಟ ಸಂಜೀವಿನಿ ಯೋಜನೆಯಡಿ ಕೋಳಿ ಸಾಕಾಣಿಕೆಗೆ ಆಸಕ್ತಿ ಹೊಂದಿರುವ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟಗಳನ್ನು ಹಾಗೂ ಕೋಳಿ ಸಾಕಾಣಿಕೆಗೆ ಸೂಕ್ತ ಸ್ಥಳಾವಕಾಶವನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ತೈಲೂರು ಗ್ರಾಮದ ಪಶು ಚಿಕಿತ್ಸಾಲಯ ಆಸ್ಪತ್ರೆಗೆ ಭೇಟಿ ನೀಡಿದ ಕೆ.ಆರ್.ನಂದಿನಿ ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡುತ್ತಿರುವ ಕುರಿತು ಹಾಗೂ ಕಾಲುಬಾಯಿ ಜ್ವರ ಲಸಿಕೆ ಹಾಕಿರುವ ಬಗ್ಗೆ ಪರಿಶೀಲಿಸಿದರು. ಆಸ್ಪತ್ರೆಯ ಹೊರರೋಗಿ ವಹಿ ಹಾಗೂ ಚಿಕಿತ್ಸಾ ವಿವರಗಳ ವಹಿಗಳನ್ನು ಪರಿಶೀಲನೆ ನಡೆಸಿದರು.