ಕಾಲ ಮಿತಿಯೊಳಗೆ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಕ್ರಿಯಾಯೋಜನಾ ವರದಿ ಸಲ್ಲಿಸುವ ಕೆಲಸ ಮಾಡಿದಾಗ ವರ್ಷಾಂತ್ಯದ ಒತ್ತಡ ತಪ್ಪಿಸಬಹುದು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಕೆ.ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

- ಹರಿಹರ ತಾಪಂನಲ್ಲಿ ಅಧಿಕಾರಿಗಳಿಗೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಕೆ.ಗಿರೀಶ್ ಸೂಚನೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಕಾಲ ಮಿತಿಯೊಳಗೆ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಕ್ರಿಯಾಯೋಜನಾ ವರದಿ ಸಲ್ಲಿಸುವ ಕೆಲಸ ಮಾಡಿದಾಗ ವರ್ಷಾಂತ್ಯದ ಒತ್ತಡ ತಪ್ಪಿಸಬಹುದು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಕೆ.ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಜುಲೈ 15ರೊಳಗೆ ಪ್ರಸ್ತುತ ವರ್ಷದ ಯೋಜನಾ ವರದಿಯನ್ನು ಕಳುಹಿಸಬೇಕು. ಹೀಗೆ ಮಾಡುವುದರಿಂದ ಯಾವುದೇ ಕಾಮಗಾರಿ ಪೆಂಡಿಂಗ್ ಇರುವುದಿಲ್ಲ. ಸೆಪ್ಟೆಂಬರ್ ವೇಳೆಗೆ ಗ್ರಾಂಟ್ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ನಡೆಸಿ, ಬೇಗ ಬೇಗ ಕಾಮಗಾರಿಗಳನ್ನು ಮುಗಿಸಿದರೆ ವರ್ಷಾಂತ್ಯದ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆ ಮಾಹಿತಿ ಪಡೆದು ಕಾಮಗಾರಿಗಳು ಸರಿಯಾದ ಸಮಯಕ್ಕೆ ಏಕೆ ಆಗುತ್ತಿಲ್ಲ? ಸಂಬಂಧಪಟ್ಟ ಇಲಾಖೆಗಳೊಂದಿಗೆ ಭೇಟಿ ನೀಡಿ ಚರ್ಚೆ ನಡೆಸಿ. ಮಳೆಗಾಲ ಬರುತ್ತಿದೆ. ರಸ್ತೆಯಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ. ಹಾಳಾದ ರಸ್ತೆಗಳನ್ನು ಗುರುತಿಸಿ ಗುತ್ತಿಗೆದಾರರಿಂದ ಸರಿಪಡಿಸುವ ಕೆಲಸವನ್ನು ಮಾಡಬೇಕು ಎಂದರು.

ಕೃಷಿ ಇಲಾಖೆಯಿಂದ ಬಿತ್ತನೆಬೀಜ, ರಸಗೊಬ್ಬರಗಳ ದಾಸ್ತಾನುಗಳು, ಲೈಸನ್ಸ್ ಪಡೆದ ಸೊಸೈಟಿಗಳಿಂದ ಅವುಗಳ ಮಾರಾಟದ ಕ್ರಮ, ಬೆಳೆವಿಮೆ ವಿತರಣೆ ಪಾವತಿ ಮುಂತಾದವುಗಳ ಬಗ್ಗೆ ಮಾಹಿತಿ ಪಡೆದರು. ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ. ರೈತರಿಗೆ ಭತ್ತ, ಅಡಕೆ ಬದಲಿಗೆ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಲು ತಿಳಿಸಿದರು.

ಆಸ್ಪತ್ರೆ ಹಾಸ್ಟೆಲ್ ಮುಂತಾದವುಗಳ ಕಡೆ ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಮೇಲಿಂದ ಮೇಲೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರಬೇಕು. ಸಾಧ್ಯವಾದರೆ ನಗರಸಭೆಗೆ ಮಾಹಿತಿ ನೀಡಿ ಸರಿಪಡಿಸುವ ಕೆಲಸವನ್ನು ಮಾಡಬೇಕು. ಸಾರ್ವಜನಿಕ ಆಸ್ಪತ್ರೆಗೆ ಕಾಂಪೌಂಡ್ ತುರ್ತಾಗಿ ಬೇಕಾಗಿದೆ ಎಂಬ ಸಾರ್ವಜನಿಕರ ಮನವಿ ಹಿನ್ನೆಲೆ ಯೋಜನಾ ವರದಿ ತಯಾರಿಸಿ ಮೇಲಾಧಿಕಾರಿಗಳಿಗೆ ಕಳಿಸುವಂತೆ ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಜನನ-ಮರಣ ಪತ್ರ ನೀಡುವ ಬಗ್ಗೆ ವಿಳಂಬ ಆಗುತ್ತಿರುವುದನ್ನು ಗಮನಿಸಿದ ಅವರು ಆಸ್ಪತ್ರೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ತೀಚಿನ ಜನನ- ಮರಣ ಪತ್ರಗಳು ಬೇಗನೆ ವಿತರಣೆ ಆಗುತ್ತಿವೆ. ಈ ಹಿಂದಿನ ಹಳೆಯ ವರ್ಷಗಳ ಪ್ರಮಾಣ ಪತ್ರ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ಮಾಹಿತಿ ಪಡೆದರು.

ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲ ಇಲಾಖೆ ಅಧಿಕಾರಿಗಳ ಜೊತೆ ಅವರ ಇಲಾಖೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಮುಂದಿನ ಸಭೆಗೆ ಬರುವಾಗ ಇಲಾಖೆ ಮುಖ್ಯ ಅಧಿಕಾರಿಗಳೇ ಸಂಪೂರ್ಣ ಸ್ಪಷ್ಟವಾದ ಮಾಹಿತಿಯೊಂದಿಗೆ ಬರತಕ್ಕದ್ದು. ಯಾರು ತಮ್ಮ ಸಹಾಯಕರನ್ನು ಸಭೆಗೆ ಕಳುಹಿಸಬಾರದು ಎಂದು ತಾಕೀತು ಮಾಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಎಚ್.ಬಸವರಾಜ್, ಬೆಸ್ಕಾಂ ಇಲಾಖೆ ಸಹಾಯಕ ಎಂಜಿನಿಯರ್ ಕೆ.ಲಕ್ಷ್ಮಪ್ಪ, ತಾಲೂಕು ಆರೋಗ್ಯ ಅಧಿಕಾರಿ ಡಾ. ಅಬ್ದುಲ್ ಖಾದರ್, ಲೋಕೋಪಯೋಗಿ ಇಲಾಖೆ ಮರಿಸ್ವಾಮಿ, ಅರಣ್ಯ ಇಲಾಖೆಯ ಅಮೃತ, ಸಮಾಜ ಕಲ್ಯಾಣ ಇಲಾಖೆ ಹನುಮಂತಪ್ಪ, ಹಿಂದುಳಿದ ವರ್ಗಗಳ ಇಲಾಖೆಯ ಆಸ್ಮಾ ಬಾನು, ತೋಟಗಾರಿಕೆ ಇಲಾಖೆಯ ಮಮತಾ, ಆಹಾರ ಇಲಾಖೆ ಮಂಜುನಾಥ್, ತಾಲೂಕು ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

- - -

-10HRR.03:

ಹರಿಹರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ಕೆ.ಗಿರೀಶ್ ವರು ಮಾತನಾಡಿದರು.