ಬೇಡಿಕೆ ಪಟ್ಟಿ ಸಲ್ಲಿಸಿ ನರೇಗಾ ಕಾಮಗಾರಿಗಳ ಸೌಲಭ್ಯ ಪಡೆದುಕೊಳ್ಳಲಿ: ಗಂಗಯ್ಯ ವಸ್ತ್ರದ

| Published : Nov 23 2024, 12:35 AM IST

ಬೇಡಿಕೆ ಪಟ್ಟಿ ಸಲ್ಲಿಸಿ ನರೇಗಾ ಕಾಮಗಾರಿಗಳ ಸೌಲಭ್ಯ ಪಡೆದುಕೊಳ್ಳಲಿ: ಗಂಗಯ್ಯ ವಸ್ತ್ರದ
Share this Article
  • FB
  • TW
  • Linkdin
  • Email

ಸಾರಾಂಶ

ರೈತಾಪಿ ವರ್ಗದವರು ನರೇಗಾ ಅಡಿ ತಮಗೆ ಅವಶ್ಯಕವಾಗಿರುವ ಕಾಮಗಾರಿಯ ಪಟ್ಟಿ ಸಲ್ಲಿಸಬೇಕು ಎಂದು ಪಿಡಿಒ ಗಂಗಯ್ಯ ವಸ್ತ್ರದ ಹೇಳಿದರು.

ಕುಷ್ಟಗಿ: ನರೇಗಾ ಯೋಜನೆಯಡಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಬೇಡಿಕೆಯ ಪಟ್ಟಿಯನ್ನು ಸಲ್ಲಿಸುವ ಮೂಲಕ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಡಿಒ ಗಂಗಯ್ಯ ವಸ್ತ್ರದ ಹೇಳಿದರು.

ತಾಲೂಕಿನ ಕೇಸೂರು ಗ್ರಾಮದ ಶ್ರೀ ವಿಜಯ ಮಹಾಂತೇಶ್ವರ ಮಠದಲ್ಲಿ ಕೇಸೂರು ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಹಾಗೂ ವಾರ್ಡ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.2025-26ನೇ ಸಾಲಿನ ಆಯವ್ಯಯವನ್ನು ತಯಾರಿಸಬೇಕಾಗಿದ್ದು ಸಾರ್ವಜನಿಕರು, ರೈತಾಪಿ ವರ್ಗದವರು ತಮಗೆ ಅವಶ್ಯಕವಾಗಿರುವ ಕಾಮಗಾರಿಯ ಪಟ್ಟಿ ಸಲ್ಲಿಸಬೇಕು ಎಂದರು.

ನರೇಗಾ ಕಾಮಗಾರಿಗಳಾದ ದನದದೊಡ್ಡಿ, ಕುರಿ ಮೇಕೆ ಶೆಡ್, ಇಂಗು ಗುಂಡಿ, ಕೋಳಿ ಶೆಡ್, ಕೃಷಿ ಹೊಂಡ, ಮರು ಪೂರಕ ಘಟಕ, ಬದುನಿರ್ಮಾಣ, ಹಂದಿ ಶೆಡ್ , ಕೆರೆ ಅಭಿವೃದ್ಧಿ, ಸಿಸಿ ರಸ್ತೆ, ಶಾಂತಿಧಾಮ, ಗ್ರಾಮೀಣ ಸಂತೆ, ಶಾಲೆ ಕಂಪೌಂಡ್, ಶೌಚಾಲಯ, ಶಾಲಾ ಮೈದಾನ ಅಭಿವೃದ್ಧಿ, ಶಾಲೆಯಲ್ಲಿ ಅಡುಗೆ ಕೊಣೆ, ಅಂಗನವಾಡಿ ಕೇಂದ್ರ, ಸೋಕ್ ಪಿಟ್, ತೋಟಗಾರಿಕೆ ಬೆಳೆ ಸೇರಿದಂತೆ ಅನೇಕ ಕಾಮಗಾರಿಗಳಿವೆ ಎಂದರು.

ಮೇಜರ್ಮೇಂಟ್‌ ಪ್ರಕಾರ ಕೆಲಸ ಮಾಡಿ

ಸೋಮವಾರದಿಂದ ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡಲು ಅನೂಕೂಲ ಮಾಡಿಕೊಡಲಾಗುವುದು. ಈ ಕಾಮಗಾರಿಯಲ್ಲಿ ಪಾಲ್ಗೊಳ್ಳುವ ಕೂಲಿಕಾರರು ಸರಿಯಾದ ರೀತಿಯಲ್ಲಿ ಮೇಜರ್ಮೆಂಟ್ ಪ್ರಕಾರ ಕೆಲಸ ಮಾಡಬೇಕು. ಅಂದಾಗ ಮಾತ್ರ ಸಂಪೂರ್ಣ ಕೂಲಿಯ ಹಣವನ್ನು ಖಾತೆಗೆ ಜಮೆ ಮಾಡಲಾಗುವುದು ಇಲ್ಲವಾದಲ್ಲಿ ಕೂಲಿಯ ಹಣ ಕಡಿತಗೊಳಿಸಲಾಗುತ್ತದೆ. ಎಲ್ಲರೂ ಕೆಲಸದಲ್ಲಿ ಭಾಗಿಯಾಗಬೇಕು. ಎನ್ಎಂಎಂಎಸ್ ಕಡ್ಡಾಯವಾಗಿದ್ದು, ಹಾಜರಾತಿ ಇರಬೇಕು ಎಂದು ಪಿಡಿಒ ತಿಳಿಸಿದರು.

ಜೆಜೆಎಂ ವಿರುದ್ದ ಆಕ್ರೋಶ

ಸಭೆಯಲ್ಲಿ ಭಾಗವಹಿಸಿದ ಜನರು ನಮ್ಮ ಗ್ರಾಮದಲ್ಲಿ ಜೆಜೆಎಂ ನೀರು ಬರುತ್ತಿದ್ದು, ಕೆಲವು ಕಡೆ ಸೋರಿಕೆ ಉಂಟಾಗುತ್ತಿದೆ. ಇನ್ನೂ ಕೆಲವೆಡೆ ನಲ್ಲಿ ಅಳವಡಿಸಿಲ್ಲ. ಕೂಡಲೇ ಸೋರಿಕೆಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅರೆಬರೆಯಾದ ಜೆಜೆಎಂ ಕೆಲಸ ಸಂಪೂರ್ಣವಾಗಿ ಮಾಡಿಕೊಡುವತನಕ ಸುಪರ್ದಿಗೆ ಪಡೆಯಬಾರದು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಪಿಡಿಒ ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ. ಕೆಲಸ ಪೂರ್ಣವಾಗುವ ವರೆಗೂ ಸುಪರ್ದಿಗೆ ಪಡೆದುಕೊಳ್ಳುವುದಿಲ್ಲ. ಗ್ರಾಮಸಭೆಯಲ್ಲಿ ಗ್ರಾಮಸ್ಥರ ಒಪ್ಪಿಗೆ ಮೇರೆಗೆ ಸುಪರ್ದಿಗೆ ಪಡೆದುಕೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ಬರೆಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ವೀರಯ್ಯ ಮಳಿಮಠ, ಸದಸ್ಯರಾದ ಉಮೇಶ ಮಡಿವಾಳರ, ಶಾರದಾ ಜಲಕಮಲದಿನ್ನಿ, ಯಂಕಪ್ಪ ದಾಸರ ಸೇರಿದಂತೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.