ಸೆ. 30ರೊಳಗಾಗಿ ಯೋಜನಾ ಕರಡು ಪ್ರತಿಗಳನ್ನು ಜಿಪಂಗೆ ಸಲ್ಲಿಸಿ

| Published : Aug 18 2025, 12:00 AM IST

ಸಾರಾಂಶ

ವಾರ್ಡ ಸಭೆ, ಗ್ರಾಪಂ ಸಭೆ ಮತ್ತು ಸ್ಥಳಿಯ ಸಂಸ್ಥೆಗಳಲ್ಲಿ ವಾರ್ಡ್‌ ಸಭೆಗಳನ್ನು ಆದಷ್ಟು ಬೇಗನೇ ರ್ಪೂಣಗೊಳಿಸಿ, ಅಭಿವೃದ್ಧಿ ಯೋಜನೆಗಳ ಕರಡು ಪ್ರತಿ ಸಿದ್ಧಗೊಳಿಸಿ ಸೆ. 30ರ ಒಳಗಾಗಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಅ. 2 ರಂದು ಸಲ್ಲಿಸಿದ ಕರಡುಪ್ರತಿಗಳ ಪರಿಶೀಲಿಸಿ ಸರ್ಕಾರದ ಅನುಮೋದನೆ ಕಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ವಾರ್ಡ ಸಭೆ, ಗ್ರಾಪಂ ಸಭೆ ಮತ್ತು ಸ್ಥಳಿಯ ಸಂಸ್ಥೆಗಳಲ್ಲಿ ವಾರ್ಡ್‌ ಸಭೆಗಳನ್ನು ಆದಷ್ಟು ಬೇಗನೇ ರ್ಪೂಣಗೊಳಿಸಿ, ಅಭಿವೃದ್ಧಿ ಯೋಜನೆಗಳ ಕರಡು ಪ್ರತಿ ಸಿದ್ಧಗೊಳಿಸಿ ಸೆ. 30ರ ಒಳಗಾಗಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಅ. 2 ರಂದು ಸಲ್ಲಿಸಿದ ಕರಡುಪ್ರತಿಗಳ ಪರಿಶೀಲಿಸಿ ಸರ್ಕಾರದ ಅನುಮೋದನೆ ಕಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಮತ್ತು ನಗರದ ಪ್ರದೇಶಗಳಲ್ಲಿ ಆ.30ರೊಳಗಾಗಿ ವಾರ್ಡ್‌ ಸಭೆ ನಡೆಸಬೇಕು. ಸೆ.30 ರೊಳಗಾಗಿ ಗ್ರಾಪಂ ಸಭೆ ಜರುಗಿಸಬೇಕು. ತಾಪಂ ಮತ್ತು ಸ್ಥಳಿಯ ಸಂಸ್ಥೆಯ ಸಭೆಗಳನ್ನು ಸೆ.20ರೊಳಗಾಗಿ ಜರುಗಿಸಿ, ಅಭಿವೃದ್ದಿ ಯೋಜನೆಗಳ ಕರಡು ಪ್ರತಿಗಳನ್ನು ಸೆ.30ರೊಳಗಾಗಿ ಜಿಪಂಗೆ ಸಲ್ಲಿಸಬೇಕು ಎಂದು ಗಡುವು ನೀಡಿದರು.

ಇದೇ ವೇಳೆ ಸಭೆಗಳನ್ನು ಜರುಗಿಸದೇ ಅಭಿವೃದ್ಧಿ ಯೋಜನೆಗೆ ಕರಡು ಪ್ರತಿಯನ್ನು ತಯಾರಿಸಲು ಸಹಕಾರ ನೀಡದಿರುವ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ನೊಟೀಸ್ ನೀಡಬೇಕು. ಕೆಳಹಂತದ ಅಧಿಕಾರಿಗಳಿಗೆ ಕರಡು ಪ್ರತಿ ಸಿದ್ಧತೆಯಲ್ಲಿ ಹಾಗೂ ಅಧಿಕಾರಿ ಕಾರ್ಯವ್ಯಾಪ್ತಿ ಏನು ಎಂಬುದರ ಕುರಿತು ಮಾರ್ಗಸೂಚಿ ಪ್ರತಿ ನೀಡುವ ಮೂಲಕ ಅಧಿಕಾರಿಗಳಿಗೆ ತಿಳುವಳಿಕೆ ನೀಡಬೇಕು ಎಂದರು.

ಈ ಹಿಂದಿನ ಗ್ರಾಪಂ, ಸ್ಥಳೀಯ ಸಂಸ್ಥೆಗಳ ವಾರ್ಡ್‌ ಸಭೆ ನಡೆಯದಿರುವ ಕುರಿತು ಬೇಸರ ವ್ಯಕ್ತ ಪಡಿಸಿದ ಸಚಿವರು, ನಗರ ವ್ಯಾಪ್ತಿಯಲ್ಲಿ ಕೇವಲ 54 ವಾರ್ಡ್‌ ಸಭೆಗಳು ಜರುಗಿವೆ. ಇನ್ನೂ 150ಕ್ಕೂ ಅಧಿಕ ಸಭೆಗಳು ಜರುಗಬೇಕು. ಗ್ರಾಮೀಣ ಪ್ರದೇಶದಲ್ಲಿ ವಾರ್ಡ್‌ ಸಭೆ ಮತ್ತು ಗ್ರಾಮಸಭೆಗಳು ಜರುಗುತ್ತಿಲ್ಲ. ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕಾನೂನು ತಿರಸ್ಕರಿಸಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕನಿಕರ ತೋರದೆ ಕ್ರಮ ವಹಿಸಲಾಗುವುದು ಎಂದರು.

ಜಿಲ್ಲಾಡಳಿತ ಸೂಚಿತ ದಿನಾಂಕದ ಒಳಗೆ ವಾರ್ಡ್‌ ಸಭೆ ಜರುಗಿಸಿ, ಕರಡು ಪ್ರತಿಗಳನ್ನು ಅನುಮೋದನೆ ಸಲ್ಲಿಸಬೇಕು. ಎಲ್ಲ ಸಭೆಗಳ ವಿಡಿಯೋ ಗ್ರಾಫ್ ಮಾಡಬೇಕು ಎಂದು ಸೂಚಿಸಿದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗ್ರಾಪಂ ಸಭೆಗೆ ಸೆಕ್ರೆಟರಿ, ಪಿಡಿಒಗಳು ಹಾಜರಾಗದೇ ವೈಮನಸ್ಸು ಮೂಡಿ ಸಭೆ ಬರಕಾಸ್ತು ಆಗುತ್ತಿವೆ. ಗ್ರಾಪಂ ಅಧ್ಯಕ್ಷನ ಆದೇಶದಂತೆ ಪಿಡಿಒ ಸಭೆ ಕರೆದಿರುತ್ತಾರೆ. ಹಾಗಾಗಿ ಎಲ್ಲರೂ ಸಭೆಗೆ ಹಾಜರಾಗಬೇಕು ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಗ್ರಾಮ ಸಭೆಗಳನ್ನು ಬೆಳಗ್ಗೆ 10 ಗಂಟೆ ಒಳಗಾಗಿ ಜರುಗಿಸುವುದು ಸೂಕ್ತ. ಕೆಲಸದ ಅವಧಿಯಲ್ಲಿ ಸಭೆಗಳನ್ನು ಹಮ್ಮಿಕೊಂಡರೆ ರೈತರು ಹೊಲಗದ್ದೆಗಳಿಗೆ ತೆರಳಿರುತ್ತಾರೆ. ಹಾಗಾಗಿ ಬೆಳಗಿನ ಜಾವ ಹಮ್ಮಿಕೊಳ್ಳುವುದು ಸೂಕ್ತ ಎಂದರು.

ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರು ಮಾತನಾಡಿ, ಮುಳಗುಂದದಲ್ಲಿ ಸಭೆ ನಡೆದಿದೆ. ಇನ್ನೂಳಿದ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸಭೆ ನಡೆಸುವುದು ಬಾಕಿ ಇದೆ ಎಂದು ಮಾಹಿತಿ ನೀಡಿದರು.

ಜಿಪಂ ಸಿಇಒ ಭರತ್‌ ಎಸ್. ಮಾತನಾಡಿ, ಕರಡು ಪ್ರತಿ ಸಲ್ಲಿಸುವಾಗ ದಾಖಲಾತಿಗಳನ್ನು ಪರಿಪೂರ್ಣ ಗೊಳಿಸಬೇಕು. ರಾಜ್ಯದಲ್ಲಿ ಮಾದರಿ ಗ್ರಾಮಸಭೆಗಳು ಜರುಗಬೇಕು ಎಂದರು.

ಸಭೆಯಲ್ಲಿ ತಾಪಂ, ಗ್ರಾಪಂ, ಜಿಪಂ ಅಧಿಕಾರಿಗಳು, ಪಿಡಿಓಗಳು, ಸಹಕಾರ ಸಂಘ, ಹಾಲು ಉತ್ಪಾದಕರ ಒಕ್ಕೂಟ ಪದಾಧಿಕಾರಿಗಳು ಇದ್ದರು.