ಮುಡಾ ಕೇಸ್‌ ಮೇನಲ್ಲಿ ಅಂತಿಮ ವರದಿ ಸಲ್ಲಿಸಿ: ಲೋಕಾಗೆ ಸೂಚನೆ

| Published : Apr 16 2025, 12:32 AM IST

ಮುಡಾ ಕೇಸ್‌ ಮೇನಲ್ಲಿ ಅಂತಿಮ ವರದಿ ಸಲ್ಲಿಸಿ: ಲೋಕಾಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದ್ದು, ಪ್ರಕರಣದ ತನಿಖೆ ಮುಂದುವರೆಸಿ ಮೇ 7ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೈಸೂರು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದ್ದು, ಪ್ರಕರಣದ ತನಿಖೆ ಮುಂದುವರೆಸಿ ಮೇ 7ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೈಸೂರು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ.

ಮೈಸೂರು ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್‌ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ ತಕರಾರು ಅರ್ಜಿ ಸಂಬಂಧ ಯಾವುದೇ ಆದೇಶ ಸದ್ಯಕ್ಕಿಲ್ಲ. ತನಿಖೆ ಮುಂದುವರಿಸಿ ಅಂತಿಮ ವರದಿ ಸಲ್ಲಿಕೆ ಬಳಿಕ ತಕರಾರು ಅರ್ಜಿ ಕುರಿತ ತೀರ್ಪು ನೀಡಲಾಗುವುದು ಎಂದು ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಆದೇಶಿಸಿದರು.

ಪ್ರಕರಣದಲ್ಲಿ ಬಿ ರಿಪೋರ್ಟ್‌ ಸಂಬಂಧ ಯಾವುದೇ ಆದೇಶ ಹೊರಬೀಳದಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ಕಾಲಿಕವಾಗಿ ನಿರಾಳರಾಗಿದ್ದರೂ ತನಿಖೆ ಮುಂದುವರಿಸಬೇಕು ಎಂಬ ಲೋಕಾಯುಕ್ತ ಪೊಲೀಸರ ವಾದದಿಂದಾಗಿ ಪ್ರಕರಣದಲ್ಲಿ ಹಿನ್ನಡೆ ಉಂಟಾದಂತಾಗಿದೆ.

ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್‌ ಅನ್ನು ನ್ಯಾಯಾಲಯ ಅಂಗೀಕಾರ ಮಾಡಿದ್ದರೆ ಸಿದ್ದರಾಮಯ್ಯಗೆ ದೊಡ್ಡ ರಿಲೀಫ್‌ ಸಿಗುತ್ತಿತ್ತು. ಆದರೆ, ಈ ಬಗ್ಗೆ ಮೇ 7ಕ್ಕೆ ತೀರ್ಮಾನ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿರುವುದರಿಂದ ಆತಂಕ ಮುಂದುವರೆಯಲಿದೆ.ಇದೇ ವೇಳೆ ಜಾರಿ ನಿರ್ದೇಶನಾಲಯದ (ಇ.ಡಿ) ತಕರಾರು ಅರ್ಜಿ ವಿಚಾರದಲ್ಲಿ ನ್ಯಾಯಾಲಯ ನೊಂದ ವ್ಯಕ್ತಿಯಂತೆ ಪರಿಗಣಿಸಿದ್ದು, ಅದರಂತೆಯೇ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಪ್ರಕರಣದಲ್ಲಿ ಇ.ಡಿ.ಯ ಬಿ ರಿಪೋರ್ಟ್‌ ಪ್ರಶ್ನಿಸಲು ನೇರವಾಗಿ ಸಾಧ್ಯವಿಲ್ಲವಾದ್ದರಿಂದ ನೊಂದ ವ್ಯಕ್ತಿಯಂತೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದ ವಿಚಾರಣೆ ಪೂರ್ಣಗೊಂಡಿಲ್ಲ. ಅಲ್ಲದೆ, ಲೋಕಾಯುಕ್ತ ಪೊಲೀಸರೂ ತನಿಖೆ ಪೂರ್ಣಗೊಳಿಸಿಲ್ಲ. ಆದ್ದರಿಂದ ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರಿಸುವಂತೆ ಸೂಚಿಸಲಾಗಿದೆ. ಲೋಕಾಯುಕ್ತ ಸಂಸ್ಥೆ ಅಂತಿಮ ವರದಿ ಸಲ್ಲಿಸಿದ ಬಳಿಕವಷ್ಟೇ, ಅದನ್ನು ಸ್ವೀಕರಿಸಬೇಕೇ? ಅಥವಾ ತಿರಸ್ಕರಿಸಬೇಕೇ? ಎಂಬ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ನ್ಯಾಯಾಲಯ ತಿಳಿಸಿ ಮುಂದಿನ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿತು.

ದೂರುದಾರ ಸ್ನೇಹಮಯಿ‌ ಕೃಷ್ಣ ಅವರು 39 ಪುಟಗಳ ತಕರಾರು ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿ ಪ್ರಕರಣಕ್ಕೆ ಸಂಬಂಧಿಸಿದ ಬಿ ರಿಪೋರ್ಟ್‌ ಅಂತಿಮ ವರದಿಯಲ್ಲ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬದ ವಿರುದ್ಧ ಸಾಕ್ಷಿಗಳಿದ್ದರೂ ಅವುಗಳನ್ನು ಮರೆಮಾಚಲಾಗಿದೆ. ಈ ಬಗ್ಗೆ ವಿಸ್ತೃತವಾದ ತನಿಖೆ ನಡೆಸಬೇಕು ಮತ್ತು ಬಿ ರಿಪೋರ್ಟ್‌ ಅನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದರು.

ಈ ನಡುವೆ, ಇ.ಡಿ. ಸಹ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್‌ ಸಲ್ಲಿಕೆಗೆ ತಕರಾರು ಅರ್ಜಿ ಸಲ್ಲಿಸಿತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಇ.ಡಿಗೆ ತಕರಾರು ಅರ್ಜಿ ಸಲ್ಲಿಸಲು ಅವಕಾಶ ಇದೆಯೇ ಎಂದು ಸ್ಪಷ್ಟಪಡಿಸುವಂತೆ ಸೂಚಿಸಿತು. ಇ.ಡಿ ಪರ ವಕೀಲರು ವಾದ ಮಂಡಿಸಿ, ಅರ್ಜಿ ಸಲ್ಲಿಸಲು ಅವಕಾಶ ಇದೆ. ಒಂದು ವೇಳೆ ಅವಕಾಶ ನೀಡದಿದ್ದರೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಸಂಸ್ಥೆಯಾಗಿ ಅರ್ಜಿ ಸಲ್ಲಿಸಲು ಬರುವುದಿಲ್ಲವಾದ್ದರಿಂದ ನೊಂದ ವ್ಯಕ್ತಿಯಂತೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.

-ಕೋಟ್‌-

ಲೋಕಾಯುಕ್ತ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬವನ್ನು ರಕ್ಷಣೆ ಮಾಡಲು ತನಿಖೆ ಪೂರ್ಣಗೊಳಿಸದೆ ವರದಿ ಸಲ್ಲಿಸಿದ್ದಾರೆ. ಹೀಗಾಗಿ ನ್ಯಾಯಾಲಯ ಅಂತಿಮ ವರದಿ ಸಲ್ಲಿಸುವಂತೆ ಸೂಚಿಸಿದೆ. ತನಿಖಾಧಿಕಾರಿಗಳಿಗೆ ತನಿಖೆಯ ಬಗ್ಗೆ ತಿಳಿದಿಲ್ಲ. ನ್ಯಾಯಾಲಯದ ಆದೇಶ ಸರ್ಕಾರಕ್ಕೆ ಛೀಮಾರಿ ಹಾಕಿದಂತಾಗಿದೆ. ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗ ಪಡಿಸಿಕೊಂಡು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನಕ್ಕೆ ನಾನು ಅವಕಾಶ ಕೊಡುವುದಿಲ್ಲ. ನನ್ನ ಬಳಿ ಇರುವ ದಾಖಲೆ ಇಟ್ಟುಕೊಂಡು ಹೋರಾಟ ನಡೆಸುತ್ತೇನೆ.

-ಸ್ನೇಹಮಯಿ ಕೃಷ್ಣ, ದೂರುದಾರ