ನಾಳೆ ಖಾಸಗಿ ಕೊಳವೆಬಾವಿಗಳ ಮಾಹಿತಿ ಸಲ್ಲಿಸಿ: ಡಿಸಿ ಸೂಚನೆ

| Published : Apr 19 2024, 01:02 AM IST

ಸಾರಾಂಶ

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಸಂಜೆ ಬೇಸಿಗೆ ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳ ಮೇವಿನ ಸ್ಥಿತಿಗತಿ ಹಾಗೂ ಮುಂಗಾರು ಮಳೆ-ಗಾಳಿ ಹಾಗೂ ಗುಡುಗು-ಸಿಡಿಲಿನ ಅವಘಡಗಳ ಮುನ್ನಚ್ಚರಿಕೆ ಕುರಿತಂತೆ ಜಿಲ್ಲಾಧಿಕಾರಿ ವಿವರವಾದ ಮಾಹಿತಿ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಹಾವೇರಿ

ಬೇಸಿಗೆ ಕುಡಿಯುವ ನೀರು ಸರಬರಾಜು ಮಾಡಲು ಬಾಡಿಗೆ ಪಡೆದಿರುವ ಕೊಳವೆಬಾವಿಗಳ ಬಾಕಿ ಹಣವನ್ನು ವಾರದೊಳಗೆ ಪಾವತಿ ಮಾಡಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬಾಡಿಗೆ ಪಡೆದಿರುವ ಖಾಸಗಿ ಕೊಳವೆಬಾವಿಗಳ ನಿಖರ ಮಾಹಿತಿಯನ್ನು ನಾಳೆ ಸಂಜೆಯೊಳಗೆ ಸಲ್ಲಿಸುವಂತೆ ತಹಸೀಲ್ದಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಸಂಜೆ ಬೇಸಿಗೆ ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳ ಮೇವಿನ ಸ್ಥಿತಿಗತಿ ಹಾಗೂ ಮುಂಗಾರು ಮಳೆ-ಗಾಳಿ ಹಾಗೂ ಗುಡುಗು-ಸಿಡಿಲಿನ ಅವಘಡಗಳ ಮುನ್ನಚ್ಚರಿಕೆ ಕುರಿತಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವರವಾದ ಮಾಹಿತಿಯನ್ನು ಪಡೆದುಕೊಂಡರು.

ಜಿಲ್ಲೆಯ ಪ್ರತಿ ತಾಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಪ್ರಸ್ತುತ ಕುಡಿಯುವ ನೀರಿನ ಪೂರೈಕೆ, ಕೊಳವೆಬಾವಿಗಳ ನೀರಿನ ಮಟ್ಟ ಹಾಗೂ ನದಿ ಹಾಗೂ ಕೆರೆಗಳಲ್ಲಿ ನೀರು ಸಂಗ್ರಹ ಕುರಿತಂತೆ ತಹಸೀಲ್ದಾರ್‌ ಹಾಗೂ ಗ್ರಾಮೀಣ ನೀರು ಸರಬರಾಜು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ನಾಳೆ ಸಂಜೆಯೊಳಗಾಗಿ ಉಪವಿಭಾಗಾಧಿಕಾರಿಗಳು, ತಾಲೂಕು ಟಾಸ್ಕ್‌ಫೋರ್ಸ್‌ ಸಭೆ ನಡೆಸಿ ಮಾಹಿತಿ ನೀಡುವಂತೆ ಸೂಚನೆ ನೀಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಇರುವುದಿಲ್ಲ. ಎಲ್ಲೂ ಟ್ಯಾಂಕರ್ ಬಳಸುತ್ತಿಲ್ಲ. ಸರ್ಕಾರಿ ಕೊಳವೆಬಾವಿಗಳ ನೀರಿನ ಪ್ರಮಾಣ ಕಡಿಮೆಯಾದ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಹಾನಗಲ್ ಪಟ್ಟಣಕ್ಕೆ ಧರ್ಮಾ ಜಲಾಶಯದ ನೀರು, ರಾಣಿಬೆನ್ನೂರು ಹಾಗೂ ಹಾವೇರಿ ನಗರಕ್ಕೆ ತುಂಗಾಭದ್ರಾ ನದಿಯ ನೀರು ಪೂರೈಸಲಾಗುತ್ತಿದೆ. ನದಿ ನೀರು ಖಾಲಿಯಾದ ಮೇಲೆ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮುಂಗಾರು ಮಳೆ:

ಮುಂಗಾರು ಮಳೆಯ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ತಾಲೂಕು ಆಡಳಿತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೆಲವಡೆ ಮಳೆಯಾಗಿದೆ. ಗಾಳಿ, ಗುಡುಗು- ಸಿಡಿಲಿನ ಅವಘಡಗಳಿಗೆ ತಕ್ಷಣ ಸ್ಪಂದಿಸಬೇಕು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗುಡುಗು-ಸಿಡಿಲಿಗೆ ಜೀವಹಾನಿ ಸಂಭವಿಸಿದಲ್ಲಿ ತಕ್ಷಣವೇ ತೆರಳಿ ನಿಯಮಾನುಸಾರ ಪ್ರಕ್ರಿಯೆ ಕೈಗೊಂಡು ಪರಿಹಾರ ಬಿಡುಗಡೆಗೆ ಕ್ರಮಕೈಗೊಳ್ಳಲು ಸೂಚನೆ ನೀಡಿದರು.

ಚುನಾವಣಾ ಕಾರಣ ಹೇಳದೇ ಗುಡುಗು-ಸಿಡಿಲಿಗೆ ಮನೆಹಾನಿ, ಜಾನುವಾರುಗಳ ಹಾನಿ ಸಂಭವಿಸಿದ್ದಲ್ಲಿ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಬೇಕು. ಜಾನುವಾರು ಹಾನಿಯಾದಲ್ಲಿ ತಕ್ಷಣವೇ ಪೋಸ್ಟ್‌ ಮಾರ್ಟ್ಂ ನಡೆಸಿ 24 ತಾಸಿನಲ್ಲಿ ಪರಿಹಾರ ನೀಡುವ ನಿಟ್ಟಿನಲ್ಲಿ ತ್ವರಿತ ಕ್ರಮವಹಿಸಲು ಸೂಚನೆ ನೀಡಿದರು.

ಮಳೆಯಿಂದ ಮನೆಹಾನಿಯಾದರೆ ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಹಾಯಕ ಎಂಜಿನಿಯರ್‌ ಒಳಗೊಂಡ ತ್ರಿ ಸದಸ್ಯ ಸಮಿತಿ ಸ್ಥಳಕ್ಕೆ ಭೇಟಿ ಜಿಯೋ ಟ್ಯಾಗ್ ಫೋಟೋ ತೆಗೆದು ಹಾನಿಯ ಅಂದಾಜು ವರದಿ ಮಾಡಬೇಕು. ವಿಳಂಬ ಮಾಡಬಾರದು, ಮನೆಹಾನಿ ವಿಚಾರದಲ್ಲಿ ಹಳೆಯ ತಪ್ಪುಗಳು ಪನರಾವರ್ತನೆಯಾಗಬಾರದು. ಈ ಬಾರಿ ಮತ್ತೆ ತಪ್ಪು ಮಾಡಿದರೆ ಪಿಡಿಒ, ವಿಎ ಹಾಗೂ ಸಹಾಯಕ ಅಭಿಯಂತರರನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

15 ದಿನದೊಳಗಾಗಿ ಡ್ರೈನೇಜ್‌ ಕ್ಲಿನ್:

ನಗರ ಪ್ರದೇಶಗಳಲ್ಲಿ ಎಲ್ಲ ಡ್ರೈನೇಜ್‌ಗಳನ್ನು 15 ದಿನದೊಳಗಾಗಿ ಸ್ವಚ್ಛಗೊಳಿಸಿ, ಸರಾಗವಾಗಿ ಮಳೆ ನೀರು ಹರಿದುಹೋಗುವಂತೆ ಕ್ರಮವಹಿಸಿ. ಮುಂಗಾರು ಮಳೆಯಿಂದ ಡ್ರೈನೇಜ್‌ ತುಂಬಿ ಅವಘಡಕ್ಕೆ ಕಾರಣವಾಗಬಾರದು. ನಗರದ ತಗ್ಗು ಪ್ರದೇಶಗಳನ್ನು ಗುರುತಿಸಿಕೊಂಡು ಮಳೆ ನೀರಿನಿಂದ ತೊಂದರೆಗೊಳಗಾಗುವ ಸಂದರ್ಭದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಪೊಲಿಂಗ್‌ ಸ್ಟೇಷನ್ ಸುರಕ್ಷತೆ:

ಪ್ರಸ್ತುತ ಜಿಲ್ಲೆಯಲ್ಲಿ ಮಳೆಯಾಗಿರುವುದರಿಂದ ಎಲ್ಲ ಮತಗಟ್ಟೆಗಳನ್ನು ಪರಿಶೀಲಿಸಿ ಎಲ್ಲೆಲ್ಲಿ ಸೋರಿಕೆ ಕಂಡುಬಂದಿದೆ ದುರಸ್ತಿಗೊಳಿಸಿ. ಕಿಟಕಿಯಿಂದ ಕೊಠಡಿಯೊಳಗೆ ನೀರು ಹರಿದುಬಂದರೆ ದುರಸ್ತಿಗೆ ಈಗಿನಿಂದಲೇ ಕ್ರಮವಹಿಸಿ ಹಾಗೂ ಮತಗಟ್ಟೆ ಆವರಣದಲ್ಲಿ ಮಳೆ ನೀರಿನಿಂದ ಆವೃತ್ತವಾದರೆ ಸರತಿ ಸಾಲಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಮತದಾನದ ದಿನ ಮಳೆಯಿಂದ ವಿದ್ಯುತ್ ವ್ಯತ್ಯಯವಾದರೆ ಪರ್ಯಾಯವಾಗಿ ಬೆಳಕಿನ ವ್ಯವಸ್ಥೆ ಕುರಿತಂತೆ ಈಗಿನಿಂದಲೇ ಸಿದ್ಧತೆಮಾಡಿಕೊಳ್ಳಿ ಎಂದು ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗೆ ಸೂಚನೆ ನೀಡಿದರು.

ಮಹಡಿ ಸ್ವಚ್ಛಗೊಳಿಸಿ:

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಮಾತನಾಡಿ, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗದಂತೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳ ಕಟ್ಟಡ ಮೇಲ್ಛಾವಣಿಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ಮಳೆ ನೀರು ಹರಿದುಹೋಗುವಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಎಲ್ಲ ಉಪವಿಭಾಗಾಧಿಕಾರಿಗಳು, ತಹಸೀಲ್ದಾರಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.