ಉಪ ಲೋಕಾಯುಕ್ತರು ತಮ್ಮ ಅಧಿಕೃತ ವಾಹನವನ್ನು ಬಿಟ್ಟು ಸಾಮಾನ್ಯ ಜೀಪ್ ನಲ್ಲಿ ಗುಡ್ಡವನ್ನು ಏರಿದ್ದು ವಿಶೇಷವಾಗಿತ್ತು.
ಕಾರವಾರ: ಕಾರವಾರ ನಗರಸಭಾ ವ್ಯಾಪ್ತಿಯಲ್ಲಿದ್ದರೂ ಅಗತ್ಯ ಮೂಲಭೂತ ಸೌಲಭ್ಯ ವಂಚಿತ ಕುಗ್ರಾಮವಾಗಿರುವ ಗುಡ್ಡಳ್ಳಿಯ ಸಮಗ್ರ ಅಭಿವೃಧ್ದಿಯ ಕುರಿತಂತೆ ವಿವರವಾದ ಯೋಜನೆ ತಯಾರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಗರಸಭೆಯ ಅಧಿಕಾರಿಗಳಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸೂಚನೆ ನೀಡಿದರು.
ಅವರು ಗುರುವಾರ ಗುಡ್ಡಳ್ಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ರಸ್ತೆ ಸೇರಿದಂತೆ ಮೂಲಭೂತ ಸಮಸ್ಯೆಗಳ ಕುರಿತಂತೆ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.ಗುಡ್ಡಳ್ಳಿ ಗ್ರಾಮದ ಜನತೆಯ ನೂರಾರು ವರ್ಷಗಳ ಪ್ರಮುಖ ಬೇಡಿಕೆಯಾದ, ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಕುರಿತಂತೆ ಲೋಕೋಪಯೋಗಿ, ಅರಣ್ಯ ಇಲಾಖೆ ಮತ್ತು ನಗರಸಭೆಯ ಅಧಿಕಾರಿಗಳು ಯೋಜನೆಯನ್ನು ಸಿದ್ದಪಡಿಸಿ ಅಂದಾಜು ವೆಚ್ಚದ ಮಾಹಿತಿಯೊಂದಿಗೆ 15 ದಿನಗಳ ಒಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅದರ ಪ್ರತಿಯನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸುವಂತೆ ತಿಳಿಸಿದ ಅವರು, ಲೋಕಾಯುಕ್ತ ಸಂಸ್ಥೆಯಲ್ಲಿ ಈ ಪ್ರಕರಣವನ್ನು ಸುಮೋಟೋ ಆಗಿ ದಾಖಲಿಸಿ, ಈ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡುವ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು, ಅಗತ್ಯವಿದ್ದಲ್ಲಿ ಖುದ್ದು ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ, ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಉಪ ಲೋಕಾಯುಕ್ತರು ತಿಳಿಸಿದರು.
ಗ್ರಾಮದ ಜನತೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಯೋಜನೆ ರೂಪಿಸುವಂತೆ ತಿಳಿಸಿದ ಅವರು, ಇಲ್ಲಿನ ಮಕ್ಕಳು ಪ್ರತಿದಿನ ಶಿಕ್ಷಣಕ್ಕಾಗಿ ಕಡಿದಾದ ರಸ್ತೆಯನ್ನು 8 ಕಿ.ಮೀ.ಗೂ ಅಧಿಕ ದೂರದ ಅರಣ್ಯ ಪ್ರದೇಶದಲ್ಲಿ ಸಂಚರಿಸಬೇಕಾಗಿರುವುದರಿಂದ ಇವರಿಗೆ ನಗರಸಭೆಯಿಂದ ಅಗತ್ಯ ವಾಹನ ವ್ಯವಸ್ಥೆ ಮಾಡುವಂತೆ ತಿಳಿಸಿದ ಅವರು, ತಿಂಗಳಲ್ಲಿ ಒಂದು ಬಾರಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುವಂತೆ ಸೂಚನೆ ನೀಡಿದರು. ಇಲ್ಲಿ ಶಾಲೆ ಮತ್ತು ಅಂಗನವಾಡಿಯನ್ನು ಹೊಸದಾಗಿ ಕಟ್ಟುವ ಅಗತ್ಯವಿದ್ದು ಈ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪ್ರಸ್ತುತ ಇರುವ ಶಾಲೆಯಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ತಿಳಿಸಿದರು.ಇಲ್ಲಿನ ಜನತೆಯ ಮತ್ತೊಂದು ಪ್ರಮುಖ ಸಮಸ್ಯೆಯಾದ ಆಸ್ತಿ ಕುರಿತು ಹಕ್ಕುಪತ್ರಗಳ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗುಡ್ಡಳ್ಳಿ ಸಂಪರ್ಕಿಸುವ ಅತ್ಯಂತ ಕಡಿದಾದ ರಸ್ತೆಯಲ್ಲಿ ಸಂಚರಿಸಿ ಗ್ರಾಮಸ್ಥರ ಸಮಸ್ಯೆಗಳನ್ನು ಖುದ್ದು ವೀಕ್ಷಿಸಲು ಉಪ ಲೋಕಾಯುಕ್ತರು ತಮ್ಮ ಅಧಿಕೃತ ವಾಹನವನ್ನು ಬಿಟ್ಟು ಸಾಮಾನ್ಯ ಜೀಪ್ ನಲ್ಲಿ ಗುಡ್ಡವನ್ನು ಏರಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ.ದಿನೇಶ್ ಕುಮಾರ್, ಡಿವೈಎಸ್ಪಿ ಧನ್ಯಾ ನಾಯ್ಕ, ನಗರಸಭೆ ಪೌರಾಯುಕ್ತ ಜಗದೀಶ್ ಹುಲಗಜ್ಜಿ ಹಾಗೂ ಗುಡ್ಡಳ್ಳಿಯ ಸಾರ್ವಜನಿಕರು ಇದ್ದರು.
