ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಾಡಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗುವಿನ ಅದಲು ಬದಲು ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಿರುವ ಪೊಲೀಸರು ಡಿಎನ್‌ಎ ಪರೀಕ್ಷೆ ವರದಿ ಆಧಾರದಲ್ಲಿ ಮಂಗಳೂರು ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯ ಇನ್ನಷ್ಟೆ ತನ್ನ ಅಂತಿಮ ತೀರ್ಮಾನ ಪ್ರಕಟಿಸಬೇಕಾಗಿದೆ.ಮಗು ತನ್ನದಲ್ಲ ಎಂದು ಹೇಳಿಕೆ ನೀಡಿದ ಮಹಿಳೆಯದ್ದೇ ಮಗು ಎಂಬುದು ಮಗುವಿನ ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮಾತ್ರವಲ್ಲ ಮಗುವನ್ನು ಬದಲಾಯಿಸಿದ್ದಾರೆ ಎಂದು ಆಸ್ಪತ್ರೆ ವಿರುದ್ಧ ಪೋಷಕರು ನೀಡಿದ ದೂರಿಗೆ ಸಂಬಂಧಿಸಿ ಸತ್ಯಾಂಶ ಇಲ್ಲ ಎಂದು ಬಂದರು ಠಾಣಾ ಪೊಲೀಸರು ಕೋರ್ಟ್‌ಗೆ ‘ಬಿ’ ವರದಿ ಸಲ್ಲಿಸಿದ್ದಾರೆ. ಏನಿದು ಘಟನೆ?: ಮಂಗಳೂರು ತಾಲೂಕಿನ ಮಹಿಳೆಯೊಬ್ಬರು ಹೆರಿಗೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ವೆಚ್ಚ ಭರಿಸಲು ಕಷ್ಟಸಾಧ್ಯ ಎಂದ ಕಾರಣಕ್ಕೆ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ 2024 ಆಗಸ್ಟ್ 18ರಂದು ನಸುಕಿನ ಜಾವ ದಾಖಲಾಗಿದ್ದರು. ಹೆರಿಗೆ ನೋವು ಕಾಣಿಸಿದ ಹಿನ್ನೆಲೆಯಲ್ಲಿ ಅಂದೇ ಬೆಳಗ್ಗೆ ಸಹಜ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಅನಾರೋಗ್ಯ ಸ್ಥಿತಿಯಲ್ಲಿ ಇದ್ದುದರಿಂದ ಮಗುವನ್ನು ಐಸಿಯುಗೆ ಸ್ಥಳಾಂತರಿಸಿ ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು. ಮರುದಿನ ಐಸಿಯು ಘಟಕದಲ್ಲಿ ಮಗು ದೃಷ್ಟಿಮಾಂದ್ಯತೆಯಿಂದ ಬಳಲುತ್ತಿದ್ದುದನ್ನು ವೈದ್ಯರು ಪತ್ತೆ ಮಾಡಿದ್ದರು. ಈ ಬಗ್ಗೆ ಸೂಕ್ಷ್ಮವಾಗಿ ಮಾಹಿತಿಯನ್ನು ವೈದ್ಯರು ಮಗುವಿನ ಪೋಷಕರಿಗೆ ತಿಳಿಸಿದ್ದರು. ಆ.20ರಂದು ವೆನ್ಲಾಕ್ ಆಸ್ಪತ್ರೆಯ ಮಾನಸಿಕ ತಜ್ಞರು ಈ ಬಗ್ಗೆ ಮಗುವಿನ ಪೋಷಕರಿಗೆ ಕೌನ್ಸೆಲಿಂಗ್ ನಡೆಸಿದ್ದರು.
ಆ.24ರಂದು ಮಗುವಿನ ತಾಯಿ ಡಿಸ್ಚಾರ್ಜ್ ವೇಳೆ, ‘ಈ ಮಗುವನ್ನು ನಾನು ಸ್ವೀಕರಿಸುವುದಿಲ್ಲ. ಅದು ನನ್ನ ಮಗುವಲ್ಲ, ಆಸ್ಪತ್ರೆಯಲ್ಲಿ ಮಗುವನ್ನು ಅದಲು ಬದಲು ಮಾಡಲಾಗಿದೆ’ ಎಂದು ಗಂಭೀರ ಆರೋಪ ಮಾಡಿದ್ದರು. ಅದಕ್ಕೂ ಮೊದಲು ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ) ಸದಸ್ಯರು ತನಿಖೆ ನಡೆಸಿ ಮಹಿಳೆಗೆ, ‘ಮಗು ನಿಮ್ಮದೇ, ಅದಲು ಬದಲು ಆಗಿಲ್ಲ’ ಎಂದು ಮನದಟ್ಟು ಮಾಡಲು ಪ್ರಯತ್ನಿಸಿದ್ದರು. ಕೊನೆಗೂ ಆಕೆ, ‘ಈ ಮಗು ನನ್ನದಲ್ಲ, ನನಗೆ ಈ ಮಗು ಬೇಡ, ನ್ಯಾಯ ಒದಗಿಸಿಕೊಡಿ’ ಎಂದು ಹೇಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತೆರಳಿದ್ದರು.ಹೀಗಾಗಿ ಮಗುವನ್ನು ಸುಪರ್ದಿಗೆ ತೆಗೆದುಕೊಳ್ಳುವಂತೆ ಕೋರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಸಿಡಬ್ಲ್ಯೂಸಿಗೆ ಆ.26ರಂದು ಪತ್ರ ಬರೆದಿದ್ದರು. ಅಲ್ಲದೆ ಮಗುವಿನ ಪೋಷಕತ್ವ ದೃಢೀಕರಣಕ್ಕೆ ಡಿಎನ್‌ಎ ಪರೀಕ್ಷೆ ನಡೆಸುವಂತೆಯೂ ಕೋರಿದ್ದರು. ಇದೇ ಸಂದರ್ಭ ಮಗುವನ್ನು ಅದಲು ಬದಲು ಮಾಡಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆ ವೈದ್ಯರ ವಿರುದ್ಧ ಪೋಷಕರು ಬಂದರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ನಿರ್ದೇಶನ ಮೇರೆಗೆ ಮಗು ಹಾಗೂ ಮಗುವಿನ ಪೋಷಕರ ಡಿಎನ್‌ಎ ಪರೀಕ್ಷೆಗೆ ನಡೆಸಲಾಯಿತು. ಇದೇ ವೇಳೆ ಪೋಷಕರಿಂದ ಪರಿತ್ಯಕ್ತ ಮಗುವನ್ನು ಸಿಡಬ್ಲ್ಯೂಸಿ ಸದಸ್ಯರು ತಮ್ಮ ಸುಪರ್ದಿಗೆ ತೆಗೆದುಕೊಂಡರು.
ಹೆತ್ತಾಕೆಯೇ ತಾಯಿ ದೃಢ: ಡಿಎನ್‌ಎ ಪರೀಕ್ಷೆ ವರದಿಯಲ್ಲಿ ಮಗುವಿನ ಪೋಷಕರು ಹೆತ್ತಾಕೆಯೇ ಎಂಬುದು ದೃಢಪಟ್ಟಿತ್ತು. ಈ ಬಗ್ಗೆ ಡಿಎನ್‌ಎ ಪರೀಕ್ಷಾ ವರದಿಯನ್ನು ಪೊಲೀಸ್ ತನಿಖಾಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಅಲ್ಲದೆ ದೂರಿನಲ್ಲಿ ಮಗು ಅದಲು ಬದಲಾದ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ಆಸ್ಪತ್ರೆ ವಿರುದ್ಧದ ಆರೋಪಕ್ಕೆ ಪೊಲೀಸರು ಕೋರ್ಟ್‌ಗೆ ‘ಬಿ’ ವರದಿ ಸಲ್ಲಿಸಿದ್ದಾರೆ. ಹೀಗಾಗಿ ಮುಂದಿನ ಅಂತಿಮ ತೀರ್ಮಾನವನ್ನು ಕೋರ್ಟ್ ಪ್ರಕಟಿಸಬೇಕಾಗಿದೆ.ಸಿಸಿ ಕ್ಯಾಮರಾ ಫುಟೇಜ್ ದಾಖಲೆ ಸಲ್ಲಿಕೆ
ಲೇಡಿಗೋಷನ್ ಸರ್ಕಾರಿ ಆಸ್ಪತ್ರೆ ವತಿಯಿಂದ ಸಿಸಿ ಕ್ಯಾಮರಾ ದಾಖಲೆಗಳನ್ನು ಸಾಕ್ಷಿಯಾಗಿ ಪೊಲೀಸರಿಗೆ ತನಿಖೆ ವೇಳೆ ಸಲ್ಲಿಸಿದ್ದರು.
ಯಾವುದೇ ಅಂತಿಮ ವರದಿ ನಮ್ಮ ಕೈಸೇರಿಲ್ಲ. ವರದಿ ಹೀಗೆಯೇ ಬರುತ್ತದೆ ಎಂಬ ಆಲೋಚನೆ ನಮ್ಮಲ್ಲಿತ್ತು. ಕೋರ್ಟ್‌ನಿಂದಲೂ ನೋಟಿಸ್ ಬಂದಿಲ್ಲ, ಡಿಎನ್‌ಎ ಪರೀಕ್ಷಾ ವರದಿ ಸರಿ ಇಲ್ಲದಿದ್ದರೆ ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಕೋರಲಾಗುವುದು. ಯಾವುದಕ್ಕೂ ಸಮಗ್ರ ವರದಿ ಬಂದ ನಂತರವೇ ಏನು ಮಾಡಬೇಕು ಎಂದು ತೀರ್ಮಾನಿಸಲಾಗುವುದು.-ನಾಗರಾಜ್, ಮಗುವಿನ ತಂದೆ
ಡಿಎನ್‌ಎ ಪರೀಕ್ಷೆಯಲ್ಲಿ ಅವರೇ ಮಗುವಿನ ತಾಯಿ ಎಂದು ಬಂದಿರುವ ಮಾಹಿತಿ ಗೊತ್ತಾಗಿದೆ. ಅಧಿಕೃತವಾಗಿ ಇನ್ನಷ್ಟೆ ಕೋರ್ಟ್‌ನಿಂದ ಮಾಹಿತಿ ಬರಬೇಕಾಗಿದೆ. ಪೋಷಕರಿಗೆ ಮನವರಿಕೆ ಮಾಡಲಾಗುವುದು. ಸದ್ಯ ಮಗು ನಮ್ಮ ಆರೈಕೆಯಲ್ಲಿದ್ದು, ಮಗುವನ್ನು ಸಾಕಲು ಅಸಾಧ್ಯ ಎಂದು ಪೋಷಕರು ಹೇಳಿ ಅದ್ಯಾರ್ಪಣೆ(ಸರಂಡರ್) ಮಾಡಿದರೆ ಸಿಡಬ್ಲ್ಯೂಸಿ ನೋಡಿಕೊಳ್ಳಲಿದೆ.-ರೆನ್ನಿ ಡಿಸೋಜಾ, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ
---------------