ಪ್ರಕಾಶ್ ಸುಬ್ರಹ್ಮಣ್ಯ
ಸುಬ್ರಹ್ಮಣ್ಯ: ನಾಗಾರಾಧನೆಯ ಮೂಲಕ್ಷೇತ್ರ ಸುಬ್ರಹ್ಮಣ್ಯನ ಸೇವೆ ಮಾಡುತ್ತಿರುವ ಯಶಸ್ವಿನಿ ಶನಿವಾರ ತನ್ನ ಹುಟ್ಟಿದ ದಿನವಾಗಿ 23ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಲ್ಲಿ ಸಂಜೆ ವಿಶೇಷ ರಂಗ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಕಾಶಿಕಟ್ಟೆಯಿಂದ ಮುಖ್ಯ ರಸ್ತೆಯಲ್ಲಿ ಮೈಯಾಡಿಸುತ್ತಾ, ಸೊಂಡಿಲೆತ್ತಿ, ತಲೆಮುಟ್ಟಿ ಹರಸಿಕೊಂಡು ತೆರಳಿದ ದೃಶ್ಯ ಸುಂದರವಾಗಿ ಕಾಣುತಿತ್ತು.ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಸುಬ್ರಹ್ಮಣ್ಯನ ಅಣ್ಣ ಗಣಪತಿ. ಇಲ್ಲಿ ಗಣಪತಿಯನ್ನು ಆನೆಯ ಮುಖಾಂತರ ಕಾಣಹುದು. ದೇವಳಕ್ಕೆ ಬಂದ ಭಕ್ತಾದಿಗಳು ಸುಬ್ರಹ್ಮಣ್ಯನ್ನು ಭಕ್ತಿ, ಭಾವದಿಂದ ಪೂಜಿಸುತ್ತಾರೆ. ದೇವಳದ ಗರ್ಭಗುಡಿಯ ಮುಂಭಾಗದ ಹೊರಾಂಗಣದ ಎದುರು ಸುಬ್ರಹ್ಮಣ್ಯನ ಸೇವೆ ಮಾಡುತ್ತಿರುವ ಯಶಸ್ವಿನಿಯೂ ಬಂದ ಭಕ್ತಾದಿಗಳನ್ನು ಮೈಯಾಡಿಸುತ್ತಾ, ಸೊಂಡಿಲೆತ್ತಿ, ತಲೆಮುಟ್ಟಿ ಹರಸುತ್ತದೆ. ಭಯಭಕ್ತಿಯಿಂದ ಭಕ್ತಾಧಿಗಳು ಪುನಿತರಾಗುತ್ತಿರುವುದು ಇಲ್ಲಿನ ವಿಶೇಷವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಹಿಂದಿನ ಇಂದುಮತಿಯ ಬಳಿಕ ಆ ಸ್ಥಾನಕ್ಕೆ ಬಂದ ಯಶಸ್ವಿನಿ ದೇವಳದ ಪೂಜಾಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪುಟಾಣಿ ಮಕ್ಕಳ ಹಾಗೂ ಊರ ನಾಗರಿಕರ, ಭಕ್ತಾದಿಗಳ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.2004 ಜು. 18ರಂದು ಹುಟ್ಟಿದ ಯಶಸ್ವಿ ಆನೆಯನ್ನು2007 ಡಿ. 29 ರಂದು ಬಳ್ಳಾರಿ ಶಾಸಕ ಆನಂದ್ ಸಿಂಗ್ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ದಾನವಾಗಿ ನೀಡಿದಾಗ ಹೆಣ್ಣಾನೆ ಯಶಸ್ವಿ 3ರ ಹರೆಯ. ಇದೀಗ 23ರ ಹರೆಯ. ದೇವಳಕ್ಕೆ ಬಂದು 23ವರ್ಷ ಪೂರೈಸಿದೆ. ಮುಂಜಾನೆ ಹೊಳೆಯಲ್ಲಿ ಜಳಕವಾಗಿ ಆಹಾರ ಸೇವಿಸಿದ ಬಳಿಕ ಪ್ರತಿನಿತ್ಯ ಮದ್ಯಾಹ್ನದ ಪೂಜೆಗೆ 11.45ಕ್ಕೆ ದೇವಳದಲ್ಲಿ ಹಾಜರಾಗುತ್ತದೆ. ಪೂಜೆಯ ಬಳಿಕ 1ಗಂಟೆಗೆ ದೇವರಿಗೆ ವಂದಿಸಿ ಮತ್ತೆ ಸ್ವಸ್ಥಾನಕ್ಕೆ ತೆರಳುತ್ತದೆ. ಮಧ್ಯಾಹ್ನದ ಭೋಜನದ ಬಳಿಕ ಮತ್ತೆ ಸಂಜೆ ಪೂಜೆಗೆ 6.45ರಿಂದ 7.30ರ ತನಕ ದೇವಳದಲ್ಲಿ ಪೂಜೆಯ ಸಮಯ ಘಂಟೆ ಬಾರಿಸುವ ಯಶಸ್ವಿನಿ ಬಳಿಕ ಬಂದ ಭಕ್ತಾಧಿಗಳನ್ನು ಹರಸಿ ಮತ್ತೆ ಸ್ವಸ್ಥಾನ ಸೇರುವುದು ಯಶಸ್ವಿಯ ದೈನಂದಿನ ದಿನಚರಿ.ಆಹಾರ:
ರಾಗಿಮುದ್ಧೆ, ಹುರುಳಿ, ಕುಚ್ಚಲು ಅಕ್ಕಿ ಅನ್ನ, ಬೈನೆ, ತಾಳೆಗರಿ, ಕಬ್ಬು, ಬಿದಿರಿನ ಸೊಪ್ಪು ಯಶಸ್ವಿಯ ಆಹಾರ. ಮುಂಜಾನೆ 9ಕೆ.ಜಿ ರಾಗಿಮುದ್ದೆ, ಮಧ್ಯಾಹ್ನ 5ಕೆ.ಜಿ ಕುಚ್ಚಲು ಅಕ್ಕಿಯ ಅನ್ನ ಮತ್ತು 5 ಕೆ.ಜಿ ಹುರುಳಿ ಮಿಶ್ರಿತ ಆಹಾರ ನೀಡಲಾಗುತ್ತದೆ. ರಾತ್ರಿ ವೇಳೆ ಬೈನೆ, ತಾಳೆಗರಿ, ಕಬ್ಬು, ಬಿದಿರಿನ ಸೊಪ್ಪುನ್ನು ಆಹಾರವಾಗಿ ನೀಡಲಾಗುತ್ತದೆ. ಹಗಲು ಹೊತ್ತಿನಲ್ಲೂ ಕೂಡ ಸೊಪ್ಪನ್ನು ನೀಡಲಾಗುತ್ತದೆ.ಯಶಸ್ವಿ ಜಲಕ್ರೀಡೆ: ದೇವಳದ ವಾರ್ಷಿಕ ಜಾತ್ರ ಸಂದರ್ಭ ದೇವಳದ ಹೊರಾಂಗಣದಲ್ಲಿ ಜರಗುವ ನೀರುಬಂಡಿ ಉತ್ಸವದಂದು ಹಾಗೂ ಕುಮಾರಧಾರದಲ್ಲಿ ಸುಬ್ರಹ್ಮಮಣ್ಯ ದೇವರ ಜಳಕ(ಅವಭೃತೋತ್ಸವ)ದಂದು ನೀರನ್ನು ಭಕ್ತಾಧಿಗಳಿಗೆ ಚಿಮ್ಮಿಸುತ್ತ ಜಲಕ್ರೀಡೆ ಆಡುವುದನ್ನು ನೋಡುವುದೇ ದೊಡ್ಡ ಹಬ್ಬವಾಗಿದೆ. ಅಲ್ಲದೆ ರಥೋತ್ಸವ ಸಂದರ್ಭ ಚಾಮರ ಬೀಸುತ್ತಾ ಮುಂದಿನಿಂದ ಗಂಭೀರವಾಗಿ ಸಾಗುವುದನ್ನು ನೋಡುವುದು ಸೊಬಗು.ಸ್ಟೇಟಸ್ ಮೂಲಕ ಶುಭಾಶಯ: ಶನಿವರ ಗಜರಾಣಿ ಯಶಸ್ವಿನಿಯ ಹುಟ್ಟು ಹಬ್ಬದ ದಿನ. ಮುಂಜನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಯಶಸ್ವಿನಿಯ ಫೋಟೋ ಹಾಕಿ ಶುಭಾಶಯಗಳನ್ನು ಮಾಡಲಾಗಿದೆ. ಸುಬ್ರಹ್ಮಣ್ಯ ಕ್ಷೇತ್ರದ ಪ್ರತಿಯೊಬ್ಬ ಜನರ ಮೊಬೈಲ್ ಸ್ಟೇಟಸ್‌ನಲ್ಲಿ ಗಜರಾಣಿಯ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರ. ಸುಬ್ರಹ್ಮಣ್ಯ ಅಲ್ಲದೆ ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯದ ಭಕ್ತಾಧಿಗಳ ಶುಭಾಶಯಗಳು ಕೂಡ ಜಾಲತಾಣಗಳಲ್ಲಿ ಕಂಡುಬಂತು. ಅಲ್ಲದೆ ಸುಬ್ರಹ್ಮಣ್ಯ ಜನತೆಯಿಂದ ಹುಟ್ಟುಹಬ್ಬದ ಸಲುವಾಗಿ ಹಲಸಿನ ಕಾಯಿ, ಕಬ್ಬು, ಬಾಳೆಹಣ್ಣು ಇನ್ನಿತರ ವಸ್ತುಗಳನ್ನು ಆಹಾರವಾಗಿ ನೀಡಿ ಹರಸಿದರು.