ಸಾಂಗವಾಗಿ ನಡೆದ ಅಂತ್ಯ ಸುಬ್ರಮಣ್ಯೇಶ್ವರ ರಥೋತ್ಸವ

| Published : Jan 06 2025, 01:00 AM IST

ಸಾರಾಂಶ

ತುಮಕೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣವಾಗಿರುವ ತಾಲೂಕಿನ ನಾಗಲಮಡಿಕೆಯ ಶ್ರೀ ಅಂತ್ಯ ಸುಬ್ರಮಣ್ಯೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಭಾನುವಾರ ಸಾವಿರ ಸಂಖ್ಯೆಯ ಭಕ್ತರ ನಡುವೆ ಯಶಸ್ವಿ ಯಾಗಿ ನೆರವೇರಿತು. ಮಧ್ಯಾಹ್ನ 12.30ಕ್ಕೆ ನಡೆದ ಬ್ರಹ್ಮರಥೋತ್ಸವಕ್ಕೆ ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ, ತಹಸೀಲ್ದಾರ್ ಡಿ.ಎನ್.ವರದರಾಜು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಸಾವಿರಾರು ಭಕ್ತರು ಅಂತ್ಯ ಸುಬ್ರಮಣ್ಯೇಶ್ವರಸ್ವಾಮಿ ದರ್ಶನ ಪಡೆದು ಪುನೀತರಾದರು. ದೇವಸ್ಥಾನದಲ್ಲಿ ಬೆಳಗಿನ 5 ಗಂಟೆಯಿಂದಲೇ ಅಭಿಷೇಕ, ಮಂಗಳಾರತಿ, ಹೋಮ-ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರಧಾನ ಅರ್ಚಕರಾದ ಪಿ. ಬದರಿನಾಥ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.

ಮುಜರಾಯಿ ಇಲಾಖೆಗೆ ಒಳಪಟ್ಟ ಈ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು. ನೂರಕ್ಕೂ ಹೆಚ್ಚು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಸ್ಥಳದಲ್ಲಿ ನಿಯೋಜಿತರಾಗಿದ್ದರು.

ಮಾಜಿ ಸಚಿವ ವೆಂಕಟರಮಣಪ್ಪ, ಆಂಧ್ರಪ್ರದೇಶದ ಮಾಜಿ ಸಚಿವೆ ಪರಿಟಾಲ ಸುನಿತಮ್ಮ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಮಧುಗಿರಿ ಎಸಿ ಗೊಟೂರೂ ಶಿವಪ್ಪ, ತಹಸೀಲ್ದಾರ್ ಡಿ. ಎನ್. ವರದರಾಜು, ಆರ್ ಐ ಗಳಾದ ನಾರಾಯಣ್, ರಾಜಗೊಪಾಲ್, ಕಿರಣ್ ಕುಮಾರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.