ಪ್ರತಿ ತಿಂಗಳ ಪಡಿತರ ಚೀಟಿಗಳಿಗೆ ಪೂರೈಕೆ ಆಗುವ ಆಹಾರ ಧಾನ್ಯಗಳ ಬಗ್ಗೆ ಆಹಾರ ಇಲಾಖೆಯ ಸಚಿವರು ಗಮನ ನೀಡಬೇಕು. ಕಳಪೆ ಆಹಾರ ಪೂರೈಕೆ ಮಾಡುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜಯಕರ್ನಾಟಕ ಸಂಘಟನೆಯ ಮುಖಂಡ ಬಸವರಾಜ ತಾವರೆ ಆಗ್ರಹಿಸಿದರು.
ಎಸ್.ಜಿ. ತೆಗ್ಗಿನಮನಿ
ನರಗುಂದ: ದೇಶದಲ್ಲಿ ಬಡವರು ಆಹಾರ ಕೊರತೆಯಿಂದ ಬಳಲಬಾರದೆಂದು ಸರ್ಕಾರಗಳು ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು ಪಡಿತರ ವ್ಯವಸ್ಥೆ ಮೂಲಕ ನೀಡುತ್ತಿವೆ. ಆದರೆ ಆಗಸ್ಟ್‌ನಲ್ಲಿ ವಿತರಿಸಿದ ರೇಷನ್ ಜೋಳದಲ್ಲಿ ಕಲ್ಲು, ಮಣ್ಣು ಮಿಶ್ರಿತವಾಗಿದ್ದು, ಕಳಪೆಯಾಗಿವೆ ಎಂಬ ದೂರುಗಳು ಗ್ರಾಹಕರಿಂದ ಕೇಳಿಬಂದಿವೆ.ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಆಹಾರ ಧಾನ್ಯವನ್ನು ಆಹಾರ ಇಲಾಖೆಯವರು ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡುತ್ತಿದ್ದಾರೆ. ಆದರೆ ಪಡಿತರ ಕಾರ್ಡುದಾರರಿಗೆ ಬಂದಿರುವ ಜೋಳ ಸಂಪೂರ್ಣ ಕಳಪೆಯಾಗಿದೆ. ಜೋಳದಲ್ಲಿ ಕಲ್ಲು, ಮಣ್ಣು ಕಂಡುಬಂದಿದೆ. ತಿನ್ನಲು ಯೋಗ್ಯವಿಲ್ಲದ ಜೋಳವನ್ನು ವಿತರಿಸುತ್ತಿದ್ದು, ಈ ಕುರಿತು ತಾಲೂಕಿನ ಹಲವೆಡೆ ಗ್ರಾಹಕರಿಂದ ದೂರು ಕೇಳಿಬಂದಿವೆ.
ವಿಜಯನಗರದಿಂದ ಪೂರೈಕೆ: ಈ ತಿಂಗಳ ಪಡಿತರ ಕಾರ್ಡುದಾರರಿಗೆ ವಿತರಣೆ ಮಾಡಲು ವಿಜಯನಗರ ಜಿಲ್ಲೆಯ ಬೈರಾಪುರದಿಂದ ಜೋಳ ತರಿಸಿಕೊಳ್ಳಲಾಗಿದೆ. ಈ ಜೋಳ ಸಂಪೂರ್ಣ ಕಳಪೆಯಾಗಿದ್ದರೂ ಆಹಾರ ಇಲಾಖೆಯ ಅಧಿಕಾರಿಗಳು ಅದನ್ನೆ ವಿತರಣೆ ಮಾಡುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.ಅಧಿಕಾರಿಗಳು ನಿರ್ಲಕ್ಷ್ಯ: ಪ್ರತಿ ತಿಂಗಳ ಪಡಿತರ ಕಾರ್ಡುದಾರರಿಗೆ ನೀಡುವ ಆಹಾರ ಧಾನ್ಯಗಳ ಗೋದಾಮಿಗೆ ಬಂದು ತಕ್ಷಣವೇ ಎಲ್ಲ ಆಹಾರ ಧಾನ್ಯಗಳ ಚೀಲವನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಿ ಯೋಗ್ಯ ಇದ್ದರೆ ಮಾತ್ರ ರೇಷನ್ ವಿತರಣೆ ಕೇಂದ್ರಗಳಿಗೆ ಪೂರೈಕೆ ಮಾಡಬೇಕು. ಒಂದು ವೇಳೆ ಆಹಾರ ಧಾನ್ಯ ಯೋಗ್ಯ ಇಲ್ಲದಿದ್ದರೆ ವಾಪಸ್ ಕಳಿಸಿ ಗುಣಮಟ್ಟದ ಆಹಾರ ಧಾನ್ಯಗಳನ್ನು ತರಿಸಿಕೊಂಡು ವಿತರಣೆ ಮಾಡಬೇಕು. ಆದರೆ ತಾಲೂಕಿನ ಆಹಾರ ನಿರೀಕ್ಷಕರು ಕಳಪೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಿರುವುದು ಸರಿಯೇ ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.
ಪಡಿತರ ಕಾರ್ಡ್ ವಿವರ: ಪಟ್ಟಣದಲ್ಲಿ 12, ತಾಲೂಕಿನ ಗ್ರಾಮೀಣ ಭಾಗದಲ್ಲಿ 18 ನ್ಯಾಯಬೆಲೆ ಅಂಗಡಿಗಳಿವೆ. ಇದರಲ್ಲಿ 2691 ಅಂತ್ಯೋದಯ, 20,562 ಬಿಪಿಎಲ್ ಕಾರ್ಡ್‌ಗಳಿವೆ. ಈ ಎಲ್ಲ ಪಡಿತರ ಚೀಟಿಗಳಿಗೆ ಪೂರೈಕೆಯಾದ 5,398 ಕ್ವಿಂಟಲ್ ಜೋಳವು ಸಂಪೂರ್ಣ ಕಳಪೆಯಾಗಿದೆ ಎನ್ನಲಾಗುತ್ತಿದೆ.ಕ್ರಮಕ್ಕೆ ಆಗ್ರಹ: ಪ್ರತಿ ತಿಂಗಳ ಪಡಿತರ ಚೀಟಿಗಳಿಗೆ ಪೂರೈಕೆ ಆಗುವ ಆಹಾರ ಧಾನ್ಯಗಳ ಬಗ್ಗೆ ಆಹಾರ ಇಲಾಖೆಯ ಸಚಿವರು ಗಮನ ನೀಡಬೇಕು. ಕಳಪೆ ಆಹಾರ ಪೂರೈಕೆ ಮಾಡುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜಯಕರ್ನಾಟಕ ಸಂಘಟನೆಯ ಮುಖಂಡ ಬಸವರಾಜ ತಾವರೆ ಆಗ್ರಹಿಸಿದರು.
ವಾಪಸ್ ಕಳಿಸ್ತೇವೆ: ಕಳಪೆ ಜೋಳವನ್ನು ವಾಪಸ್ ಕಳುಹಿಸಿ ಗುಣಮಟ್ಟದ ಜೋಳವನ್ನು ತರಿಸಿಕೊಂಡು ಪಡಿತರ ಕಾರ್ಡದಾರರಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಎಸ್.ಡಿ. ಪಾಟೀಲ ತಿಳಿಸಿದರು.