ಸಾರಾಂಶ
ಬ್ಯಾಡಗಿ: ಡಿಜಿಟಲ್ ದಾಖಲೆಗಳಿಂದ ಈಗಾಗಲೇ ಆಡಳಿತದಲ್ಲಿ ಸಾಕಷ್ಟು ಸುಧಾರಣೆಗಳನ್ನು ಕಂಡುಕೊಂಡಿದ್ದು, ಸಾರ್ವಜನಿಕರ ಕೆಲಸ ವಿಳಂಬವಾಗುವುದನ್ನು ತಪ್ಪಿಸಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಸ್ಥಳೀಯ ತಾಲೂಕು ಕಚೇರಿಯಲ್ಲಿ ಡಿಜಿಟಲೈಸ್ಡ್ ರೆಕಾರ್ಡ್ ರೂಮ್ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.ಆಡಳಿತ ವ್ಯವಸ್ಥೆ ಆಧುನೀಕರಿಸುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿರುವ ರಾಜ್ಯ ಸರ್ಕಾರ, ತಾಲೂಕು ಕಚೇರಿಗಳಲ್ಲಿ ಆಗುತ್ತಿರುವ ವಿಳಂಬಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.
ಆರ್‌ಟಿಸಿ, ಮ್ಯೂಟೇಶನ್, ಭೂದಾಖಲೆಗಳನ್ನು ಡಿಜಿಟಲೈಸ್ ಮಾಡಲಾಗಿದೆ. ಸಾರ್ವಜನಿಕರಿಗೆ ಅನಗತ್ಯ ವಿಳಂಬ ಹಾಗೂ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವ ವ್ಯವಸ್ಥೆಗೆ ಕಡಿವಾಣ ಹಾಕಿದ್ದೇವೆ ಎಂದರು.ತಾಲೂಕು ಕಚೇರಿಯಲ್ಲಿ ಜನರ ಕೆಲಸ ಮಾಡಿಕೊಡಲು ಏಜೆಂಟರು ಹುಟ್ಟಿಕೊಂಡಿದ್ದೇ ಆದಲ್ಲಿ ಈ ಕಚೇರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತದೆ. ಅಷ್ಟೇ ಏಕೆ? ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ವೃತ್ತಿ ಜೀವನಕ್ಕೆ ಇದೊಂದು ಕಪ್ಪು ಚುಕ್ಕೆಯಿದ್ದಂತೆ. ತಾಲೂಕಾಡಳಿತ ಎಂದಿಗೂ ಮುಕ್ತವಾಗಿ ಮತ್ತು ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು. ಅಂದಾಗ ಮಾತ್ರ ಸರ್ಕಾರದ ಗೌರವ ಉಳಿಯಲು ಸಾಧ್ಯ ಎಂದರು.
ತಹಸೀಲ್ದಾರ್ ಫಿರೋಜ್ ಶಾ ಸೋಮನಕಟ್ಟಿ ಮಾತನಾಡಿ, ದಾಖಲೆಗಳ ನಿರ್ವಹಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕಳೆದ 2016ರಿಂದ ದಾಖಲೆಗಳ ಡಿಜಿಲೀಕರಣ ಪ್ರಾರಂಭಿಸಲಾಗಿದೆ. ಇದರಿಂದ ಬಹುತೇಕ ದಾಖಲೆಗಳು ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿರಲು ಸಾಧ್ಯವಿದೆ. ಹೀಗಾಗಿ ಸರ್ಕಾರ ಎಲ್ಲ ದಾಖಲೆಗಳನ್ನು ಡಿಜಟೀಲೀಕರಣಗೊಳಿಸುವ ಗುರಿ ಹೊಂದಿದೆ. ಮೋಸದ ವಹಿವಾಟಿಗೆ ಕಡಿವಾಣ ಬೀಳಲಿದ್ದು, ಯಾವುದೇ ಕಚೇರಿಗಳಿಗೆ ಭೌತಿಕ ಭೇಟಿ ಅಗತ್ಯತೆ ನಿವಾರಿಸಲಿದೆ. ಇನ್ನಾರು ತಿಂಗಳಲ್ಲಿ ಸಂಫೂರ್ಣವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.ಮುಖಂಡರಾದ ರುದ್ರಣ್ಣ ಹೊಂಕಣ, ಮಾರುತಿ ಅಚ್ಚಿಗೇರಿ, ಚನ್ನಮ್ಮ ಎಮ್ಮೇರ, ಶಿರಸ್ತೇದಾರರಾದ ನಾಗರತ್ನಾ ಕಾಳೇರ, ಮಂಜುಳಾ ನಾಯಕ, ಕಂದಾಯ ನಿರೀಕ್ಷಕರಾದ ರಾಘವೇಂದ್ರ ಕುಲಕರ್ಣಿ, ಆರ್.ಸಿ. ದ್ಯಾಮನಗೌಡ್ರ, ಶಶಿಧರಸ್ವಾಮಿ ಹಿರೇಮಠ, ಜಿಲ್ಲಾ ಸಂಯೋಜಕ ಗಿರೀಶ ಬಾಗೇವಾಡಿ, ಗ್ರಾಮ ಆಡಳಿತಾಧಿಕಾರಿ ಗುಂಡಪ್ಪ ಹುಬ್ಬಳ್ಳಿ, ಶಬ್ಬೀರ ಬಾಗೇವಾಡಿ, ಬಿ.ಎನ್. ಖವಾಸ, ವಿಶ್ವನಾಥ ಉಪ್ಪಲದಡ್ಡಿ, ಸಂತೋಷ ವಿಭೂತಿ, ಲಕ್ಷ್ಮೀ ಹೊಂಬಾಳೆ, ನಂದಾ ಮಲ್ಲನಗೌಡ್ರ, ಕಾವ್ಯಾ ತಳವಾರ, ಮಮತಾ ಕೊಪ್ಪದ, ಗೌರಮ್ಮ ಬಾರ್ಕಿ, ಮೇಘಶ್ರೀ, ನಂದಾ ಕುರಕುಂದಿ, ಮಾಲತೇಶ ಮಡಿವಾಳರ, ಶಾಂತಮ್ಮ ಮಡಿವಾಳರ ಇನ್ನಿತರರಿದ್ದರು.