ಸಾರಾಂಶ
ಉಪನಗರ ರೈಲು: 5.5 ಕಿ.ಮೀ. ವಿಸ್ತರಣೆಗೆ ಮುಂದಾದ ಕೆ-ರೈಡ್; ರಾಜ್ಯ ಸರ್ಕಾರ ಒಪ್ಪಿಗೆ, ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಕೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಉಪನಗರ ರೈಲು ಯೋಜನೆಯ ರಾಜಾನುಕುಂಟೆ-ಹೀಲಲಿಗೆ (ಕನಕ ಮಾರ್ಗ) ಮಾರ್ಗವನ್ನು ಚಂದಾಪುರದವರೆಗೆ ಹಾಗೂ ವೈಟ್‌ಫೀಲ್ಡ್-ಕೆಂಗೇರಿ (ಪಾರಿಜಾತ ಕಾರಿಡಾರ್) ಮಾರ್ಗವನ್ನು ಚಲ್ಲಘಟ್ಟದ ಕಡೆಗೆ ವಿಸ್ತರಿಸುವ ಮೂಲಕ ಉಪನಗರ ರೈಲ್ವೇ ಯೋಜನೆಯನ್ನು 5.5 ಕಿಮೀ ವಿಸ್ತರಣೆ ಮಾಡಲು ಕೆ-ರೈಡ್ ಮುಂದಾಗಿದೆ.ರಾಜ್ಯದ ನಗರ ಭೂ ಸಾರಿಗೆ ನಿರ್ದೇಶನಾಲಯ ಈ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ರಾಜ್ಯ ಸರ್ಕಾಕ್ಕೆ ಸಲ್ಲಿಸಿತ್ತು. ರಾಜ್ಯ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಅನುಮೋದನೆಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ನೈಋತ್ಯ ರೈಲ್ವೆಯ ಅಭಿಪ್ರಾಯ ಪಡೆದು ಅಂತಿಮವಾಗಿ ರೈಲ್ವೆ ಬೋರ್ಡ್ ಇದಕ್ಕೆ ಒಪ್ಪಿಗೆ ನೀಡಬೇಕಿದೆ ಎಂದು ಕೆ-ರೈಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕನಕ ಮಾರ್ಗ 1 ಕಿ.ಮೀ. ಹಾಗೂ ಪಾರಿಜಾತ ಮಾರ್ಗ ಸುಮಾರು 4.5 ಕಿಮೀ ಉದ್ದ ವಿಸ್ತರಣೆಯಾಗುವ ಸಾಧ್ಯತೆಯಿದೆ. ಅಧಿಕೃತವಾಗಿ ಎಷ್ಟು ಕಿಮೀ ವಿಸ್ತರಣೆ ಆಗಲಿದೆ ಎಂಬುದು ಪೂರ್ವ ಕಾರ್ಯಸಾಧ್ಯತಾ ವರದಿ ಬಳಿಕವೇ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಕನಕ ಮಾರ್ಗದ ಕಾಮಗಾರಿ ಗುತ್ತಿಗೆ ಕಾರ್ಯಾದೇಶವನ್ನು ಇತ್ತೀಚೆಗೆ ಲಾರ್ಸೆನ್ ಆ್ಯಂಡ್ ಟೂಬ್ರೊ ಕಂಪನಿಗೆ ಹಸ್ತಾಂತರ ಮಾಡಲಾಗಿದ್ದು, ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ.ಇನ್ನು, ಉಪನಗರ ರೈಲು ಯೋಜನೆ ನಾಲ್ಕು ಮಾರ್ಗ ಸೇರಿ ಒಟ್ಟಾರೆ 148.5 ಕಿ.ಮೀ. ಉದ್ದವಿದ್ದು, 25.1 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ‘ಮಲ್ಲಿಗೆ’ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದೆ.