ಸಾರಾಂಶ
ಕಲಾ ವಿಭಾಗ, ವಿಜ್ಞಾನ ವಿಭಾಗ, ವಾಣಿಜ್ಯ ಒಟ್ಟು 26,5411 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಡಿಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಧಾರವಾಡ
ಮಾರ್ಚ್ 1ರಿಂದ 22ರ ವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆಯಾದ್ಯದಂತ 43 ಪರೀಕ್ಷಾ ಕೇಂದ್ರಗಳನ್ನು ಸಿದ್ದಪಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ತೊಂದರೆಯಾಗದಂತೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹಾಗೂ ಕಾಲೇಜಿನ ಪ್ರಾಂಶುಪಾಲರು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಮಂಗಳವಾರ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಕಲಾ ವಿಭಾಗ, ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗದಲ್ಲಿ 12,704 ಗಂಡು ಮಕ್ಕಳು, 12,707 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 26,5411 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಉಪನ್ಯಾಸಕರನ್ನು ವಿಶೇಷ ಜಾಗೃತ ದಳದ ಸದಸ್ಯರನ್ನಾಗಿ ನೇಮಿಸಲಾಗಿದೆ. ಕೊಠಡಿ ಮೇಲ್ವಿಚಾರಕರನ್ನು ಹೊರತುಪಡಿಸಿ ಬೇರೆಯವರು ಮೊಬೈಲ್ ಬಳಕೆ ಮಾಡಲು ನಿಷೇಧಿಸಲಾಗಿದೆ, ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲು ಅನುಮಾನಸ್ಪದ ಜನರು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರತಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಜರಾಕ್ಸ್ ಅಂಗಡಿಗಳನ್ನು ಮತ್ತು ಕಂಪ್ಯೂಟರ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ ಮಾಡಲು ಕ್ರಮ ಜರುಗಿಸಲಾಗುವುದು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಹೇಳಿದರು.ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪರೀಕ್ಷೆ ಪ್ರಾರಂಭವಾಗುವ ಮೂರು ದಿನ ಮುಂಚಿತವಾಗಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಒಯ್ಯುವ ವಾಹನಗಳಿಗೆ ಜಿಪಿಎಸ್‌ನ್ನು ಅಳವಡಿಸಲಾಗುವುದು ಎಂದ ಅವರು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರನ್ನು ಪ್ರಶ್ನೆ ಪತ್ರಿಕೆ ಪಾಲಕರನ್ನಾಗಿ ನೇಮಿಸಲಾಗಿದೆ ಎಂದರು.
ಡಿ.ಡಿ.ಪಿ.ಯು. ಸುರೇಶ ಕೆ. ಮಾತನಾಡಿದರು. ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರ್ಕಾರಿ ಮತ್ತು ಅನುದಾನಿತ ಖಾಸಗಿ ಕಾಲೇಜಿನ ಪ್ರಾಂಶುಪಾಲರು ಸಭೆಯಲ್ಲಿದ್ದರು.