ವಿಶ್ವದರ್ಶನ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ
ಕನ್ನಡಪ್ರಭ ವಾರ್ತೆ ಯಲ್ಲಾಪುರವಿದ್ಯೆಯಿಂದ ವಿನಯ ಅದರಿಂದ ಜೀವನದ ಪರೀಕ್ಷೆಯಲ್ಲಿ ಸಫಲತೆ ಗಳಿಸಬೇಕು ಎಂದು ಉಪನ್ಯಾಸಕ ಮಹೇಶ ಭಟ್ಟ ಹೇಳಿದರು.
ವಿಶ್ವದರ್ಶನ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಜೀವನದ ಬಹುಮುಖ್ಯ ಘಟ್ಟದಲ್ಲಿ ನಿಮ್ಮ ಪ್ರಯಾಣ ಸಾಗುತ್ತಿದೆ. ಕಲಿಕೆಯೊಂದಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯೊಂದಿಗಿನ ಶಿಕ್ಷಣ ಬೇಕು. ವಿದ್ಯೆಯಿಂದ ಪಡೆಯಬೇಕಾಗಿದ್ದು ವಿನಯ. ಅದರಿಂದ ಸಮಾಜದಲ್ಲಿ ಗುರುತಿಸಲ್ಪಟ್ಟು ಉತ್ತಮ ಜೀವನ ಸಾಗಿಸಬೇಕು. ನಾವು ಸತ್ಪುರುಷರಾಗಿ ಬದುಕಬೇಕು. ನಮ್ಮ ಪುರಾಣ ಇತಿಹಾಸಗಳಿಂದ ಆದರ್ಶ ಚಿಂತನೆ ಪಡೆಯಬೇಕು. ವಿದ್ಯೆಯಿಂದ ವಿನಯ ಬರದೇ ಹೊದರೇ ಜೀವನ ಪರಿಕ್ಷೆಗಳಲ್ಲಿ ಸಫಲತೆ ಕಷ್ಟ. ಹಿರಿಯರ ಗೌರವಿಸುವ ಚಿಂತನೆ ನಮಲ್ಲಿರಬೇಕು. ಸಂಸತ್ತು ಎಂದರೆ ಮುನ್ನಡೆಸುವುದು ಮತ್ತು ರಕ್ಷಿಸುವುದು ಎಂದರ್ಥ. ನಿಮ್ಮ ವಿದ್ಯಾರ್ಜನೆಯೊಂದಿಗೆ ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನಡೆಸಬೇಕಿದೆ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ಡಿ.ಕೆ. ಗಾಂವ್ಕರ್ ಮಾತನಾಡಿ, ವಿಶ್ವದರ್ಶನದ ಕಾರ್ಯಕ್ರಮದ ಹಿಂದಿರುವುದು ಸಂಸ್ಕಾರ ಮತ್ತು ಸಂಸ್ಕೃತಿ. ಒಳ್ಳೆಯ ಸಂಗತಿಗಳ ಪಾಲನೆ ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸುತ್ತೇವೆ. ಮುಂದೆ ದೇಶದ ಪ್ರತಿನಿಧಿಗಳ ಆಯ್ಕೆ ಮಾಡುವ ಅವಕಾಶ ನಿಮ್ಮದಾಗುತ್ತದೆ. ಸುಸಂಸ್ಕೃತ ಪ್ರಜೆಗಳಿಲ್ಲದೇ ಹೋದರೆ ಶ್ರೇಷ್ಠರಲ್ಲದವರ ಆಯ್ಕೆಯ ಮೂಲಕ ದೇಶಕ್ಕೆ ಹಾನಿಯಾಗುವಂತಹ ಸಂಭವವಿರುತ್ತದೆ. ಈ ಕುರಿತು ಅರಿವು ಮೂಡಿಸಲು ಶಾಲೆಯಲ್ಲಿ ಚುನಾವಣೆ ಮಾಡುತ್ತೇವೆ ಎಂದರು.
ಉಪನ್ಯಾಸಕಿ ಕಾವ್ಯ ಹೆಗಡೆ ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಪ್ರಾಂಶುಪಾಲ ನಾಗರಾಜ ಹೆಗಡೆ ಸ್ವಾಗತಿಸಿದರು. ಉಪ ಪ್ರಾಂಶುಪಾಲ ವಿನಾಯಕ ಭಟ್ಟ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.