ನಗರಸಭೇಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿ: ಸಂಸದ ಡಾ.ಕೆ.ಸುಧಾಕರ್

| Published : Sep 26 2024, 11:39 AM IST

ಸಾರಾಂಶ

ಹೊಸಕೋಟೆ ನಗರಸಭೆಗೆ ಅಧ್ಯಕ್ಷೆಯಾಗಿ ಆಶಾ ರಾಜಶೇಖರ್, ಉಪಾಧ್ಯಕ್ಷರಾಗಿ ಸಿಪಿಎನ್ ನವೀನ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಆಶಾ ರಾಜಶೇಖರ್, ಉಪಾಧ್ಯಕ್ಷ ಸ್ಥಾನಕ್ಕೆ ಸಿಪಿಎನ್ ನವೀನ್ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಒಕ್ಕಲಿಗರಿಗೆ ಪ್ರಥಮ ಮಹಿಳಾ ಅಧ್ಯಕ್ಷ ಸ್ಥಾನ

ಕನ್ನಡಪ್ರಭ ವಾರ್ತೆ ಹೊಸಕೋಟೆ

ಇಲ್ಲಿಯ ನಗರಸಭೆಗೆ ಅಧ್ಯಕ್ಷೆಯಾಗಿ ಆಶಾ ರಾಜಶೇಖರ್, ಉಪಾಧ್ಯಕ್ಷರಾಗಿ ಸಿಪಿಎನ್ ನವೀನ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಆಶಾ ರಾಜಶೇಖರ್, ಉಪಾಧ್ಯಕ್ಷ ಸ್ಥಾನಕ್ಕೆ ಸಿಪಿಎನ್ ನವೀನ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ದುರ್ಗಾಶ್ರೀ ಅವಿರೋಧ ಆಯ್ಕೆ ಘೋಷಿಸಿದರು.

ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಹೊಸಕೋಟೆಯಲ್ಲಿ ಕಾಂಗ್ರೆಸ್ ಆಡಳಿತ ಇದ್ದರೂ ಸಹ ನಗರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಎಂಟಿಬಿ ನಾಗರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ ನಗರಕ್ಕೆ ಅಗತ್ಯವಾದ ಅನುದಾನಗಳನ್ನು ಸಮರ್ಪಕವಾಗಿ ಒದಗಿಸಿದ ಹಿನ್ನೆಲೆಯಲ್ಲಿ ನಗರ ಅಭಿವೃದ್ಧಿಯಾಗಿದೆ. ಆದ್ದರಿಂದಲೇ ನಗರಸಭೆ ವ್ಯಾಪ್ತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಿಪಕ್ಷದವರು ಸ್ಪರ್ಧೆ ಮಾಡದೆ ಹಿಂದೆ ಸರಿದಿದ್ದಾರೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ಮಾತನಾಡಿ, ಪ್ರಥಮ ಬಾರಿಗೆ ಒಕ್ಕಲಿಗ ಸಮುದಾಯದ ಮಹಿಳೆಗೆ ಅಧ್ಯಕ್ಷ ಸ್ಥಾನ ದಕ್ಕಿರುವುದು ಸಂತಸ ತಂದಿದೆ. ಎಲ್ಲಾ ಸದಸ್ಯರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ನಗರಸಭೆ ಉಪಾಧ್ಯಕ್ಷ ಸಿಪಿಎನ್ ನವೀನ್ ಮಾತನಾಡಿ, ನಗರದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ತಹಸೀಲ್ದಾರ್ ಸೋಮಶೇಖರ್, ನಗರಸಭೆ ಪೌರಾಯುಕ್ತ ಜಹೀರ್ ಅಬ್ಬಾಸ್, ಸದಸ್ಯರಾದ ಸೋಮಶೇಖರ್, ಕೆ.ದೇವರಾಜ್, ರತ್ನಮ್ಮ, ಶೋಭಾ ಶಿವಾನಂದ್, ಗುಲ್ಜಾರ್, ವೆಂಕಟಲಕ್ಷ್ಮಿ, ಅರುಣ್ ಕುಮಾರ್, ಶೋಭಾ ಜುಂಜಪ್ಪ, ನಿತಿನ್ ಶ್ರೀನಿವಾಸ್, ಕವಿತಾ ಗಂಗರಾಜ್, ಗುಳ್ಳು ನಾಗರಾಜ್, ರಾಮಾಂಜಿನಿ, ಬಸವರಾಜು, ರೋಶನ್, ಶಾಜಿಯ ಕಲೀಮ್, ಆನಂದ್, ವೆಂಕಟೇಶ್, ಕೃಷ್ಣಪ್ಪ, ಪವಿತ್ರ ಹಾಜರಿದ್ದರು.