ಕಷ್ಟ ಎದುರಿಸಿ ನಿಂತಾಗ ಯಶಸ್ಸು ಸಾಧಿಸಲು ಸಾಧ್ಯ: ತಹಸೀಲ್ದಾರ್‌

| Published : Nov 30 2024, 12:48 AM IST

ಸಾರಾಂಶ

ವಿದ್ಯಾರ್ಥಿಗಳು ಕಂಠಪಾಠದ ಮಾದರಿ ಅಧ್ಯಯನ ಬಿಟ್ಟು ಅರ್ಥಮಾಡಿಕೊಳ್ಳುತ್ತಾ ವಿಷಯ ಅರಿತುಕೊಳ್ಳಬೇಕು. ಮೊಬೈಲ್‌ ಅನ್ನು ಅಧ್ಯಯನಕ್ಕೆ ಪೂರಕ ವಾಗುವಂತೆ ಬಳಸಬೇಕು

ಕನ್ನಡಪ್ರಭ ವಾರ್ತೆ ಹುನಗುಂದ

ಆಧುನಿಕ ಜಗತ್ತು ಸ್ಪರ್ಧಾತ್ಮಕ ಬದುಕಿನ ಮೇಲೆ ನಿಂತಿದೆ. ಆದ್ದರಿಂದ ವಿದ್ಯಾರ್ಥಿಗಳು ಕಷ್ಟ ಎದುರಿಸಿ ನಿಂತಾಗ ಯಶಸ್ಸ ಸಾಧಿಸಲು ಸಾಧ್ಯವೆಂದು ಹುನಗುಂದ ತಹಸೀಲ್ದಾರ್‌ ನಿಂಗಪ್ಪ ಬಿರಾದರ ಹೇಳಿದರು.

ಪಟ್ಟಣದ ವಿ.ಎಂ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ 2024-25ನೇ ಶೈಕ್ಷಣಿಕ ಸಾಲಿನ ಕಾಲೇಜು ಒಕ್ಕೂಟ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿಗಳು ಕಂಠಪಾಠದ ಮಾದರಿ ಅಧ್ಯಯನ ಬಿಟ್ಟು ಅರ್ಥಮಾಡಿಕೊಳ್ಳುತ್ತಾ ವಿಷಯ ಅರಿತುಕೊಳ್ಳಬೇಕು. ಮೊಬೈಲ್‌ ಅನ್ನು ಅಧ್ಯಯನಕ್ಕೆ ಪೂರಕ ವಾಗುವಂತೆ ಬಳಸಬೇಕು ಎಂದರು.

ವಿ.ಮ.ವಿ.ವ.ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ಜೀವನದ ಅಂಕುಡೊಂಕು ಮೆಟ್ಟಿನಿಂತಾಗ ಯಶಸ್ಸ ಪಡೆಯಲು ಸಾಧ್ಯ. ಸರ್ವರಲ್ಲಿಯೂ ಕೌಶಲ್ಯವಿದೆ ಅಂತಹ ಕೌಶಲ್ಯ ಅಭಿವ್ಯಕ್ತಗೊಳಿಸುವಂತೆ ಪ್ರಯತ್ನವಿರಬೇಕು.ಇನ್ನೊಬ್ಬರಿಗೆ ಕೊಡುವುದರಲ್ಲಿದ್ದ ಸುಖ ಪಡೆದುಕೊಳ್ಳುವುದರಲ್ಲಿ ಇರುವುದಿಲ್ಲ. ಹಾಗಾಗೀ ಕೊಡುವಂತಹ ಗುಣ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳು ಸಾಗಬೇಕು ಎಂದರು.

ಪ್ರಾಚಾರ್ಯ ಪ್ರೊ.ಎಸ್.ಕೆ.ಮಠ ಮಾತನಾಡಿ, ಮಹಾವಿದ್ಯಾಲಯ ಬೆಳೆದು ಬಂದ ಹಾದಿ ಪರಿಚಯಿಸಿದರು. ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ.ಆನಂದ ತೇಲಿ ಅತಿಥಿಗಳನ್ನು ಸ್ವಾಗತಿಸಿದರು. ಕ್ರೀಡಾ ನಿರ್ದೇಶಕ ಎಸ್.ಬಿ.ಚಳಗೇರಿ ವರ್ಗಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಅಭಿಷೇಕ ಮುಡಪಲದಿನ್ನಿ ಪ್ರಾರ್ಥಿಸಿ ಭಾಗ್ಯಶ್ರೀ ಗೋಲಪ್ಪನವರ ವಂದಿಸಿದರು. ಸುವರ್ಣ ಹೊಸಳ್ಳಿ ನಿರೂಪಿಸಿದರು.