ಪುತ್ತೂರು: ಜಾತ್ರೆ, ದೈವಗಳ ನೇಮ, ನಾಗಾರಾಧನೆ, ನಾಗಮಂಡಲ ಮೊದಲಾದ ಧಾರ್ಮಿಕ ಕಾರ್ಯಗಳನ್ನು ಹೇಗೆ ನಡೆಸಬೇಕೆಂಬುದು ದ.ಕ. ಜಿಲ್ಲೆಯ ಜನತೆಗೆ ಚೆನ್ನಾಗಿ ಗೊತ್ತಿದೆ. ನಮ್ಮ ಕಾರ್ಯಕ್ರಮ ಎಂಬ ಭಾವನೆಯೊಂದಿಗೆ ಎಲ್ಲರೂ ಸೇರಿಕೊಂಡು ಕೆಲಸ ಮಾಡುತ್ತಿರುವುದರಿಂದ ಹನುಮಗಿರಿಯ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದು ಇತಿಹಾಸ ಸೃಷ್ಠಿಸಲಿದೆ ಎಂದು ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು ಅವರು ಹೇಳಿದರು.

ಹನುಮಗಿರಿಯ ವೈದೇಹಿ ಸಭಾಂಗಣದಲ್ಲಿ ಮಂಗಳವಾರ ಹನುಮಗಿರಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ `ಸರ್ವಗ್ರಾಮ ಭಕ್ತರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಕ್ತರಿಗೆ ಅವಕಾಶ: ಕೋಟಿ ಶ್ರೀರಾಮ ತಾರಕ ಮಹಾಯಜ್ಞದ ಜಪದೀಕ್ಷೆ ಹಾಗೂ ನಾರಿಕೇಳ ಸಮರ್ಪಣಾ ಕಾರ್ಯಕ್ರಮ ಮಾ.೨ರಂದು ಕ್ಷೇತ್ರದಲ್ಲಿ ನಡೆಯಲಿದೆ. ಅಂದು ಪಾಲ್ಗೊಳ್ಳಲು ಸಾಧ್ಯವಾಗದ ಭಕ್ತರು ಬೇರೆ ದಿನಗಳಲ್ಲಿಯೂ ರಾಮ ಜಪದೀಕ್ಷೆ ಸ್ವೀಕರಿಸಬಹುದು. ರಾಮ ಜಪದೀಕ್ಷೆಗೆ ಕಡ್ಡಾಯ ದಿನವಿಲ್ಲ. ಯಾವುದೋ ಸೂತಕ ಎಂಬುದೂ ಇಲ್ಲ ಎಂದು ತಿಳಿಸಿದ ಅವರು, ಕೋಟಿ ಶ್ರೀರಾಮ ತಾರಕ ಮಹಾಯಜ್ಞದ ದಿನದಂದು ಅಖಂಡ ಭಜನಾ ಕಾರ್ಯಕ್ರಮ ನಡೆಸುವ ಕುರಿತು ಮುಂದೆ ನಿರ್ಧರಿಸಲಾಗುವುದು ಎಂದರು.

ಹೊಸ ಇತಿಹಾಸ: ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಅವರು ಮಾತನಾಡಿ, ಇಂದು ವಿಭಾಗಾವಾರು ಬೈಠಕ್ ನಡೆಸಿ ಎಲ್ಲರ ಅಭಿಪ್ರಾಯಗಳನ್ನು ಪಡೆಯಲಾಗಿದೆ. ಇಷ್ಟರ ತನಕ ಆಗದ ರೀತಿಯಲ್ಲಿ ಬ್ರಹ್ಮಕಲಶೋತ್ಸವ, ಕೋಟಿ ಶ್ರೀರಾಮ ತಾರಕ ಮಹಾಯಜ್ಞ, ನಾರಿಕೇಳ ಸಮರ್ಪಣಾ ಕಾರ್ಯಕ್ರಮಗಳು ನಡೆಯಲಿದ್ದು, ಹನುಮಗಿರಿಯ ಬ್ರಹ್ಮಕಲಶೋತ್ಸವ ಹೊಸ ಇತಿಹಾಸ ಸೃಷ್ಠಿಸಲಿದೆ ಎಂದರು.ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ,ಮುರಳೀಕೃಷ್ಣ ಹಸಂತಡ್ಕ, ಸೀತಾರಾಮ ರೈ ಕೆದಂಬಾಡಿಗುತ್ತು, ಅರುಣ್‌ಕುಮಾರ್ ಪುತ್ತಿಲ, ವಿದ್ಯಾ ಆರ್ ಗೌರಿ, ಪರಮೇಶ್ವರಿ ಭಟ್ ಅವರು ಆಯಾ ವಿಭಾಗದಲ್ಲಿ ನಡೆದ ಬೈಠಕ್‌ನಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ತಿಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರಾದ ರವಿಕಿರಣ್ ಶೆಟ್ಟಿ ಬೆದ್ರಾಡಿ, ಸುಬ್ಬಪ್ಪ ಪಾಟಾಳಿ, ನಹುಷಾ ಭಟ್, ಪ್ರವೀಣ್ ಸರಳಾಯ, ಸವಿತಾ ರೈ, ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಮ್ ಪಿ, ಶಿವರಾಮ ಶರ್ಮ ಕತ್ರಿಬೈಲು ಮತ್ತಿತರರು ಇದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ ರೆಂಜ ವಂದಿಸಿದರು. ಸಾಮಾಜಿಕ ಜಾಲತಾಣ ಸಮಿತಿಯ ಹರಿಪ್ರಸಾದ್ ನಿರೂಪಿಸಿದರು