ಹಳಿಯಾಳ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ಗುರುವಾರ ಪತ್ರಕರ್ತ, ಲೇಖಕ ರಾಜು ಅಡಕಳ್ಳಿ ಅವರ ಸಕ್ಸಸ್ ಸೂತ್ರದಾರರು ಕೃತಿ ಬಿಡುಗಡೆಗೊಳಿಸಲಾಯಿತು.
ಹಳಿಯಾಳ: ಭಾರತ ಜ್ಞಾನದ ಸಂಪತ್ತು, ಸಾಹಿತ್ಯ ಸಂಸ್ಕೃತಿಯ ಆಗರ, ಇಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿದ್ದಾರೆ ಎಂದು ವಿಶ್ರಾಂತ ಪ್ರಾಧ್ಯಾಪಕ, ಅಂಕಣಕಾರ ಡಾ. ಆರ್.ಜಿ. ಹೆಗಡೆ ಹೇಳಿದರು.
ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಹಳಿಯಾಳ ತಾಲೂಕು ಘಟಕ, ವಿ.ಆರ್.ಡಿ.ಎಂ. ಟ್ರಸ್ಟ್ ಆಶ್ರಯದಲ್ಲಿ ಗುರುವಾರ ನಡೆದ ಪತ್ರಕರ್ತ ಲೇಖಕ ರಾಜು ಅಡಕಳ್ಳಿ ಅವರ ಸಕ್ಸಸ್ ಸೂತ್ರದಾರರು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಯಸಸ್ಸು ಕೇವಲ ಅದೃಷ್ಟದಿಂದ ಬರುವುದಿಲ್ಲ. ಶಿಸ್ತು, ಶ್ರಮ, ಸಕಾರಾತ್ಮಕ ಚಿಂತನೆ ಮತ್ತು ನಿರಂತರ ಕಲಿಕೆಯಿಂದಲೇ ಸಾಧ್ಯ ಎಂಬುದನ್ನು ಈ ಕೃತಿಯೂ ಸಾರುತ್ತಿದೆ ಎಂದರು.ಕೃತಿ ಪರಿಚಯ ಮಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಲೇಖಕಿ ಅಕ್ಷತಾ ಕೃಷ್ಣಮೂರ್ತಿ, ರಾಜು ಅಡಕಳ್ಳಿ ಅವರು ಈ ಕೃತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶೇಷವಾದ ಸಾಧನೆ ಮಾಡಿದವರನ್ನು ಗುರುತಿಸುವ ಮತ್ತು ಹೊರ ಜಗತ್ತಿಗೆ ಪರಿಚಯಸುವ ಮಹತ್ಕಾರ್ಯ ಮಾಡಿದ್ದಾರೆ. ಇಲ್ಲಿ ಕೇವಲ ದೊಡ್ಡವರನ್ನಷ್ಟೇ ಪರಿಚಯಿಸಿಲ್ಲ, ಶ್ರಮಿಕರನ್ನು ಹಾಗೂ ಶ್ರಮ ಸಾಧಕರನ್ನು ಕೂಡ ಪರಿಚಯಿಸಿರುವುದು ವಿಶೇಷ ಎಂದರು.
ಕೃತಿಕಾರ ರಾಜು ಅಡಕಳ್ಳಿ ಮಾತನಾಡಿ, ಬರಹ ಮತ್ತು ಪುಸ್ತಕದ ಹಿಂದೆ ಬಹಳಷ್ಟು ಶ್ರಮ ಇರುತ್ತದೆ. ಆ ಪುಸ್ತಕವನ್ನು ಓದುಗ ಓದಿ ಅಭಿಪ್ರಾಯಿಸಿದಾಗಲೇ ಲೇಖಕನ ಜವಾಬ್ದಾರಿ ಹೆಚ್ಚುತ್ತದೆ ಎಂದರು.ವಿಆರ್‌ಡಿಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿ, ರಾಜು ಅಡಕಳ್ಳಿ ಅವರ ಬರಹದಲ್ಲಿ ಓದಿಸಿಕೊಂಡು ಹೋಗುವ ಶಕ್ತಿ ಇದೆ. ಅವರಿಗೆ ನಾಡಿನ ಸಶಕ್ತ ಬರಹಗಾರರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ, ತಾನು ತನ್ನದು ಎನ್ನುವ ಸಮಾಜದ ಒಳಗಡೆ ಮನುಷ್ಯ ಪ್ರತ್ಯೇಕತೆಯ ಗೋಡೆ ನಿರ್ಮಿಸಿಕೊಂಡಿದ್ದಾನೆ. ಸಾಹಿತ್ಯದ ಮೂಲಕ ಆ ವಾತಾವರಣ ಹೋಗಲಾಡಿಸುವ ಹಾಗೂ ಬಾಂಧವ್ಯದ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಬೇಕಾಗಿದೆ. ಅಂತಹ ಪ್ರಯತ್ನವನ್ನು ಸಾಧಕರನ್ನು ಪರಿಚಯಿಸುವ ಮೂಲಕ ರಾಜು ಅಡಕಳ್ಳಿ ಮಾಡಿದ್ದಾರೆ ಎಂದರು.ಜಿಲ್ಲಾ ಕಸಾಪ ಮತ್ತು ತಾಲೂಕು ಘಟಕ ಹಾಗೂ ವಿ.ಆರ್.ಡಿ.ಎಂ. ಟ್ರಸ್ಟ್ ವತಿಯಿಂದ ರಾಜು ಅಡಕಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸುರ ಇದ್ದರು. ಕಸಾಪ ತಾಲೂಕು ಘಟಕ ಅಧ್ಯಕ್ಷೆ ಸುಮಂಗಲಾ ಅಂಗಡಿ ಸ್ವಾಗತಿಸಿದರು, ಕಾರ್ಯದರ್ಶಿ ಶಾಂತಾರಾಮ ಚಿಬುಲಕರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶ್ರೀಧರ ಬುಳ್ಳನ್ನವರ ವಂದಿಸಿದರು.ಮನುವಿಕಾಶ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗಣಪತಿ ಭಟ್, ಪ್ರಾಥಮಿಕ ಶಾಲಾ ಶಿಕ್ಷಕರ ಶಿರಸಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಸತೀಶ ನಾಯಕ ಭಾವಿಕೇರಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಸ್ವಾಮಿ, ಪರಿಸರ ಉದ್ಯಮಿ ವೈಭವ ಕಾಮತ್ ಉಪಸ್ಥಿತರಿದ್ದರು.