ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿನ ಪ್ರಥಮ ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಸಿ., ಬಿ.ಎ. ಮತ್ತು ಬಿ.ಎಸ್.ಡಬ್ಲ್ಯೂ. ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು.ಕಾಲೇಜಿನ ಐಕ್ಯೂಎಸಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂದಾಪುರ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ಮಾತನಾಡಿ, ಸಾಧಿಸುವ ಛಲ, ಕಠಿಣ ಪರಿಶ್ರಮ, ಸನ್ನಡತೆ ಮತ್ತು ಮನೋಸ್ಥೈರ್ಯವಿದ್ದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.ಇಂದಿನ ಶೋಕಿ ಜಗತ್ತಿನಲ್ಲಿ ಯುವಜನತೆಯನ್ನು ತಪ್ಪುದಾರಿಗೆಳೆವ ಹಲವಾರು ವಿದ್ಯಮಾನಗಳು ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಅಧ್ಯಯನದಲ್ಲಿನ ಏಕಾಗ್ರತೆ ಕಳೆದುಕೊಳ್ಳದೇ ಗುರಿ ತಲುಪುವಂತಾಗಬೇಕು. ಮಾದಕ ವ್ಯಸನ, ಸಾಮಾಜಿಕ ಅಪರಾಧಗಳು ಮುಂತಾದ ಕಲಹಗಳಲ್ಲಿ ತೊಡಗಿಕೊಳ್ಳದೇ ವಿದ್ಯೆ, ಉದ್ಯೋಗ, ಸಾಮಾಜಿಕ ಕಳಕಳಿಗಳಿಗೆ ಬದ್ಧರಾಗಿದ್ದಲ್ಲಿ ತಾವು ಬೆಳಗುವುದರ ಜೊತೆಗೆ ತಮ್ಮ ಕುಟುಂಬಕ್ಕೂ- ಸಮಾಜಕ್ಕೂ ಆಧಾರವಾಗಬಲ್ಲರೆಂದರು. ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್, ಯುವಜನತೆ ವಿದ್ಯೆಯ ಜೊತೆ ತಮ್ಮ ಬದುಕು ರೂಪಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಸೂಚಿಸುತ್ತಾ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆಯಿತ್ತರು.ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ್ ನೀಲಾವರ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ಸಹಪ್ರಾಧ್ಯಾಪಕ ಉಮೇಶ್ ಪೈ ವಂದಿಸಿದರು. ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಂಥಪಾಲಕ ಕೃಷ್ಣ ಸಾಸ್ತಾನ, ಡಾ. ಹಮಿದಾ ಭಾನು ಹಾಗೂ ಎಲ್ಲ ಬೋಧಕ - ಬೋಧಕೇತರ ವೃಂದದವರು ಉಪಸ್ಥಿತರಿದ್ದರು.