ಮಕ್ಕಳಿಗೆ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳು ತುಂಬಾ ಮುಖ್ಯ. ವಿದ್ಯಾರ್ಥಿಗಳು ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ ಮೈಗೂಡಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣಲು ಸಾಧ್ಯ.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿದ್ಯಾರ್ಥಿಗಳು ಆತ್ಮವಿಶ್ವಾಸ ಮೈಗೂಡಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣಲು ಸಾಧ್ಯ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳು ತುಂಬಾ ಮುಖ್ಯ. ವಿದ್ಯಾರ್ಥಿಗಳು ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಡಾ.ಎಚ್.ಎಸ್.ಮಧುಸೂದನ್ ಪಠ್ಯೇತರ ಚಟುವಟಿಕೆಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ

ತಿಳಿಸಿಕೊಟ್ಟು ವಿದ್ಯಾರ್ಥಿಗಳು ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನದ ಹಾದಿ ಉತ್ತಮಗೊಳ್ಳುವುದು ಎಂದರು.

ಕಾರ್ಯಕ್ರಮದಲ್ಲಿ ಪುಸ್ತಕ ಪ್ರೇಮಿ ಅಂಕೇಗೌಡ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಹಾಗೂ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎಂ.ಬಿ.ಪ್ರಮೀಳಾ, ಭೂಗೋಳ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ದೀಪು, ದೈಹಿಕ ಶಿಕ್ಷಣ ನಿರ್ದೇಶಕ ವಿ.ಶ್ರೀನಿವಾಸ, ಎನ್ಎಸ್ಎಸ್ ಘಟಕದ ಸಂಚಾಲಕ ಡಾ.ಎಸ್.ಎಲ್.ಶಂಕರ್, ರೆಡ್ ಕ್ರಾಸ್ ಸಮಿತಿ ಸಂಚಾಲಕ ಡಾ.ಎಂ.ಪಿ.ರವಿಕುಮಾರ, ರೋವರ್ಸ್ ಸಂಚಾಲಕ ಡಾ.ಎಂ.ಸಿ.ರಮೇಶ, ರೇಂಜರ್ಸ್ ಸಂಚಾಲಕಿ ವಿ.ಆಶಾ ರಾಣಿ, ಅಧ್ಯಾಪಕರುಗಳು, ಉಪನ್ಯಾಸಕರು, ಆಡಳಿತ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಅಂತಾರಾಷ್ಟ್ರೀಯ ಕಲಾವಿದರ ದಿನಾಚರಣೆ

ಶ್ರೀರಂಗಪಟ್ಟಣ:ಅಂತಾರಾಷ್ಟ್ರೀಯ ಕಲಾವಿದರ ದಿನಾಚರಣೆಯ ಅಂಗವಾಗಿ ಪಟ್ಟಣದ ತಾಲೂಕು ಪಂಚಾಯ್ತಿ ಸಮೀಪದ ಕುವೆಂಪು ಪ್ರತಿಮೆ ಬಳಿ ಐಕ್ಯ ಅಲೈಯನ್ಸ್ ಕ್ಲಬ್ ವತಿಯಿಂದ ಜಿಲ್ಲೆಯ ಆರು ಮಂದಿ ಸಾಧಕ ಕಲಾವಿದರನ್ನು ಸನ್ಮಾನಿಸಲಾಯಿತು.

ವಿವಿಧ ಕಲಾ ಪ್ರಕಾರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪಟ್ಟಣದ ರಂಗಭೂಮಿ ಕಲಾವಿದ ಕೆ.ಜೆ.ಲೋಕೇಶ್, ಹಾರ್ಮೋನಿಯಂ ಕಲಾವಿದ ಶಿವಲಿಂಗಚಾರ್, ಡಿ.ಎ.ಕೆರೆ ಗ್ರಾಮದ ಕಥೆಗಾರ ಮತ್ತು ಕಲಾವಿದ ತೋಟಶೆಟ್ಟಿ, ಕೆ.ಆರ್.ಪೇಟೆ ಹರಿಕಥಾ ಕಲಾವಿದ ದೇವರಾಜು, ರಾಗಿಮುದ್ದನಹಳ್ಳಿ ರಂಗಭೂಮಿ ಕಲಾವಿದ ಎಂ.ಸಿ.ಕುಮಾರ್, ಪಟ್ಟಣದ ಕುಂಚಕಲಾವಿದ ಶ್ರೀಪಾದ ಸೇರಿದಂತೆ ಆರು ಮಂದಿ ಹಿರಿಯ ಹಾಗೂ ಸಾಧಕ ಕಲಾವಿದರನ್ನು ಗುರುತಿಸಿ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಅಲೈಯನ್ಸ್ ಕ್ಲಬ್‌ನ ಪ್ರಾದೇಶಿಕ ಅಧ್ಯಕ್ಷೆ ಎನ್.ಸರಸ್ವತಿ, ಪ್ರಮುಖರಾದ ಆಶಾಲತಾ, ಡಾ.ಸುವರ್ಣದೇವಿ, ಗುರುಬಸವಯ್ಯ, ಅಚೀವರ್ಸ್ ಅಕಾಡೆಮಿ ಅಧ್ಯಕ್ಷ ಡಾ.ರಾಘವೇಂದ್ರ ಚಲನಚಿತ್ರ ನಿರ್ದೇಶಕ ಎಚ್.ವಿ.ಪುಟ್ಟಸ್ವಾಮಿ ಸೇರಿದಂತೆ ಇತರರು ಇದ್ದರು.