ಸಾರಾಂಶ
ಚಿಕ್ಕಮಗಳೂರು, ಪ್ರತಿಯೊಬ್ಬರು ಕೇವಲ ಸಮಯಕ್ಕಾಗಿ ಕಾಯದೆ ತಮ್ಮ ಬದುಕು ರೂಪಿಸಲು ಧೈರ್ಯ, ಸಾಹಸ, ಕಾಯಕ ಮಾಡಿದಾಗ ಮಾತ್ರ ಬದುಕು ಹಸನುಗೊಳ್ಳುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಬಸವತತ್ವ ಪೀಠದಲ್ಲಿ ಶಿವಾನುಭವ ಗೋಷ್ಠಿ, ಬಸವ ಜಯಂತಿ,
ಚಿಕ್ಕಮಗಳೂರು, ಮೇ 31ಪ್ರತಿಯೊಬ್ಬರು ಕೇವಲ ಸಮಯಕ್ಕಾಗಿ ಕಾಯದೆ ತಮ್ಮ ಬದುಕು ರೂಪಿಸಲು ಧೈರ್ಯ, ಸಾಹಸ, ಕಾಯಕ ಮಾಡಿದಾಗ ಮಾತ್ರ ಬದುಕು ಹಸನುಗೊಳ್ಳುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಕಲ್ಯಾಣ ನಗರದ ಬಸವತತ್ವ ಪೀಠ- ಬಸವ ಮಂದಿರದಲ್ಲಿ ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಶಿವಾನುಭವಗೋಷ್ಠಿ ಹಾಗೂ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಾವ ವ್ಯಕ್ತಿ ಶ್ರದ್ಧೆ, ಪರಿಶ್ರಮದಿಂದ ಕಾಯಕ ಮಾಡುತ್ತಾನೋ ಅಂತವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ, ಬಸವೇಶ್ವರರು, ಕನಕದಾಸರು ಸೇರಿದಂತೆ ಬಹಳಷ್ಟು ಮಂದಿ ಸಾಮಾನ್ಯ ಕುಟುಂಬದಲ್ಲಿ ಜನಿಸಿ ವಿಶ್ವವಿಖ್ಯಾತಿ ಪಡೆದಿದ್ದಾರೆ ಎಂದು ತಿಳಿಸಿದರು. ಸರ್ಕಾರ ವಿಶ್ವ ಗುರು ಜಗಜ್ಯೋತಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಬಳಿಕ ನಡೆಯುತ್ತಿರುವ ಶಿವಾನುಭವಗೋಷ್ಠಿ ಹಾಗೂ ವಿಶ್ವಗುರು ಬಸವಣ್ಣ ಜಯಂತಿ ವಿಶೇಷವಾದದ್ದು ಎಂದು ಹೇಳಿದರು. ಕೆಲವು ಗ್ರಾಮಗಳಿಗೆ ಸೀಮಿತವಾಗಿದ್ದ ಬಸವ ಮಂದಿರ ಬಸವತತ್ವ ಪೀಠವನ್ನು ಕರ್ನಾಟಕ, ಭಾರತ ದೇಶ ಮಾತ್ರವಲ್ಲದೆ ಆಸ್ಟ್ರೇಲಿಯಾದಲ್ಲಿ 18 ದಿನಗಳ ಕಾಲ ಬಸವಣ್ಣನ ವಿಚಾರಧಾರೆ ವಚನಗಳನ್ನು ಪ್ರಚಾರ ಮಾಡುವ ಅವಕಾಶ ಬಸವತತ್ವದಲ್ಲಿ ಡಾಕ್ಟರೇಟ್ ಪಡೆದಿರುವ ಬಸವ ಮರುಳಸಿದ್ಧ ಶ್ರೀಗಳು ನಡೆಸಿದ್ದಾರೆ ಎಂದು ಶ್ಲಾಘಿಸಿದರು. 12ನೇ ಶತಮಾನದಲ್ಲಿ ಜೇಡರ ದಾಸಿಮಯ್ಯ ಹೇಳಿದ ಮಾತನ್ನು ಉಲ್ಲೇಖಿಸಿದ ಶಾಸಕರು, ಮಠದಲ್ಲಿ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದ್ದು, ಸಧ್ಯದಲ್ಲೇ ಉದ್ಘಾಟನೆಗೆ ಸಿದ್ಧವಾಗುತ್ತಿದೆ ಎಂದು ಹೇಳಿದರು. ಬಸವಾದಿ ಶರಣರು 12ನೇ ಶತಮಾನದಲ್ಲಿ ಕನ್ನಡದಲ್ಲಿ ರಚಿಸಿರುವ ವಚನಗಳು ಈಗಿನ ಕಾಲಘಟ್ಟಕ್ಕೂ ಪ್ರಸ್ತುತವಾಗಿವೆ. ಭೂಮಿ ಮೇಲೆ ಈ ಪ್ರಪಂಚ ಇರುವವರೆಗೆ ಈ ವಚನಗಳು ಜೀವಂತವಾಗಿರುತ್ತವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವತತ್ವ ಪೀಠದ ಅಧ್ಯಕ್ಷ ಡಾ.ಶ್ರೀ ಬಸವ ಮರಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಧಾರವಾಡ ಹಿರೇಮಲ್ಲೂರು ಈಶ್ವರನ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶಶಿಧರ ತೋಡ್ಕರ್ ಬಸವತತ್ವ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಿದ್ಯುತ್ ಇಲಾಖೆ ವೀರಶೈವ ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ಶಶಿಧರ್ ವಹಿಸಿದ್ದರು. ವೇದಿಕೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿ ಸಂತೋಷ್, ನಗರಸಭಾ ಸದಸ್ಯ ಅರುಣಾ, ಟಿ.ಪಿ. ಚಂದ್ರಕಲಾ ,ಬಸವರಾಜಪ್ಪ, ಬಿ.ಎಚ್. ಹರೀಶ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. 31 ಕೆಸಿಕೆಎಂ 2ಚಿಕ್ಕಮಗಳೂರಿನ ಕಲ್ಯಾಣ ನಗರದ ಬಸವತತ್ವ ಪೀಠ-ಬಸವ ಮಂದಿರದಲ್ಲಿ ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಶಿವಾನುಭವಗೋಷ್ಠಿ ಹಾಗೂ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.