ಧರ್ಮ ಮಾರ್ಗದಿಂದ ಜೀವನದಲ್ಲಿ ಶ್ರೇಯಸ್ಸು: ವಿಧುಶೇಖರ ಶ್ರೀ

| Published : Jul 22 2025, 12:15 AM IST

ಸಾರಾಂಶ

ಶೃಂಗೇರಿ, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಸಾಗಬೇಕು. ಧರ್ಮ ಮಾರ್ಗದಲ್ಲಿ ನಡೆದಲ್ಲಿ ಜೀವನದಲ್ಲಿ ಶ್ರೇಯಸ್ಸು ಸಿಗುತ್ತದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಸಾಗಬೇಕು. ಧರ್ಮ ಮಾರ್ಗದಲ್ಲಿ ನಡೆದಲ್ಲಿ ಜೀವನದಲ್ಲಿ ಶ್ರೇಯಸ್ಸು ಸಿಗುತ್ತದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.

ಶ್ರೀ ಮಠದ ಗುರುಭವನದಲ್ಲಿ ನಾನಾ ಪ್ರಾಂತ್ಯಗಳಿಂದ ಆಗಮಿಸಿದ್ದ ದೇವಾಡಿಗ ಸಮಾಜದ ಭಕ್ತರ ಗುರುವಂದನಾ ಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣ ಮಾಡಿದರು. ಅಧರ್ಮದಿಂದ ದುಖ ಪ್ರಾಪ್ತಿಯಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಎಲ್ಲಾ ಸೌಕರ್ಯಗಳಿವೆ. ಎಲ್ಲಾ ಸೌಕರ್ಯಗಳಿದ್ದರೂ ಲೌಕಿಕ ಜಗತ್ತಿನಲ್ಲಿ ದುಃಖ ಇದೆ. ದುಃಖದಿಂದ ವಿಮುಕ್ತರಾಗಲು ಪ್ರತಿಯೊಬ್ಬರೂ ಧರ್ಮಾಚರಣೆ ಮಾಡಬೇಕು ಎಂದರು.

ಜಗತ್ತಿನಲ್ಲಿ ಧರ್ಮಾಚರಣೆ ಎಂಬುದು ಸಾವಿರಾರು ವರ್ಷಗಳಿಂದ ಬಂದ ಮೌಲ್ಯ. ಧರ್ಮಾಚರಣೆ ಎಂದಿಗೂ ಶಾಶ್ವತವಾಗಿರುತ್ತದೆ. ಅದು ಎಂದಿಗೂ ಬದಲಾವಣೆಯಾಗುವ ವಸ್ತುವಲ್ಲ. ಜಗತ್ತಿನಲ್ಲಿ ಎಲ್ಲವೂ ಬದಲಾವಣೆಯಾಗುತ್ತಲೇ ಇದ್ದರೂ ಧರ್ಮ ನೀಡುವ ಫಲಗಳಲ್ಲಿ ಯಾವುದೇ ಪರಿವರ್ತನೆ ಆಗಲು ಸಾದ್ಯವಿಲ್ಲ.

ಸೃಷ್ಠಿ ಆರಂಭದಿಂದಲೇ ಸನಾತನ ಧರ್ಮ ಆರಂಭವಾಗಿದೆ. ಅತ್ಯಂತ ಪ್ರಾಚೀನ ಸನಾತನ ಧರ್ಮದ ಜೊತೆ ಧರ್ಮದ ಮೌಲ್ಯ ಮಿಳಿತಗೊಂಡಿದೆ. ಈ ಧರ್ಮ ಅತ್ಯಂತ ಉತೃಷ್ಟವಾದುದು.ಇದರ ಮೌಲ್ಯವನ್ನು ನಾವು ಅರಿತುಕೊಳ್ಳಬೇಕು. ನಾವು ಯಾವುದು ಧರ್ಮ, ಯಾವುದು ಅಧರ್ಮ ಎಂದು ಅರಿತುಕೊಳ್ಳಬೇಕಾದರೆ ನಮಗೆ ಗುರುಗಳ ಮಾರ್ಗದರ್ಶನ ಅಗತ್ಯವಿದೆ. ಗುರುವಿನ ಮಾರ್ಗದರ್ಶನದಲ್ಲಿ ಮುನ್ನೆಡೆದಾಗ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಪುಸ್ತಕ ಓದಬೇಕು. ಪುಸ್ತಕ ಬರೆದವರು ಜ್ಞಾನಿಗಳು. ಪುಸ್ತಕದ ವಿಷಯ ತಿಳಿದವರು ಗುರುಗಳು. ಅಂತೆಯೆ ನಾವು ಗುರುಗಳು ಮಾಡಿದ ಪಾಠದಿಂದ ಹೆಚ್ಚು ಅಂಕಗಳಿಸಲು ಸಾದ್ಯವಾಗುತ್ತದೆ. ಅದೇ ರೀತಿ ಭಗವಂತ ಹೇಳಿದ ಮಾತು ಋಷಿಮುನಿಗಳಿಂದ ಹಿಡಿದು ಗುರುಪರಂಪರೆ ತನಕ ನಿರಂತರವಾಗಿ ಪರಿಮೂಡಿದೆ ಎಂದರು.

21 ಶ್ರೀ ಚಿತ್ರ 1-ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು.