ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಮಯವನ್ನು ಯಾರು ಗೌರವಿಸುತ್ತಾರೋ ಅವರಿಗೆ ಸಮಯ ಬದುಕಿನ ಯಶಸ್ಸನ್ನು ಕೊಡುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ರಾ.ಸೇ.ಯೋಜನೆ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಕಾಲೇಜಿನ ವಿವಿಧ ವೇದಿಕೆಗಳ ಸಮಾರೋಪದಲ್ಲಿ ಅವರು ಮಾತನಾಡಿ,
ನಾನು ಯಾವ ಕಾಲೇಜಿನ ಮೆಟ್ಟಿಲನ್ನೂ ಹತ್ತಿಲ್ಲ, ಯಾವ ವಿಶ್ವವಿದ್ಯಾನಿಲಯದಲ್ಲೂ ಓದಿಲ್ಲ. ಆದರೆ, ನನ್ನೊಳಗಿನ ನನ್ನ ಕಲೆ ಕಾಲೇಜಿನ ಮೆಟ್ಟಿಲನ್ನು ಹತ್ತಿಸಿದೆ. ಗೌರವ ಡಾಕ್ಟರೇಟ್ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ನೀಡುವಂತೆ ಮಾಡಿದೆ. ಇಡ್ಲಿ ಮಾರಿ ಜೀವನ ಸಾಗಿಸಿ ಜೀವನವನ್ನು ಅರ್ಥ ಮಾಡಿಕೊಂಡಿದ್ದೇನೆ. ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದ್ದು ನನ್ನ ಗುರುಗಳಾದ ಕಾಳವ್ವ ಜೋಗತಿ ಎಂದು ಸ್ಮರಿಸಿದರಲ್ಲದೆ, ಹೆತ್ತ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಒಳ್ಳೆಯ ಗುರಿ ಉದ್ದೇಶಗಳನ್ನು ಇಟ್ಟುಕೊಳ್ಳಬೇಕು. ಮೊದಲು ನಾನು ಸರಿ ಇರಬೇಕು. ಮಾನವರಾಗಿ ಯೋಚಿಸುವುದನ್ನು ಕಲಿಯಬೇಕು ಮತ್ತು ಅದರಂತೆ ನಡೆಯಬೇಕು ಎಂದು ಕಿವಿಮಾತು ಹೇಳಿದರು.ನಮ್ಮ ಸಂಸ್ಕೃತಿ ಪರಂಪರೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನ ಅರಿಯಬೇಕು. ಮೊಬೈಲು ನಿಮ್ಮನ್ನು ಜೀವನದಲ್ಲಿ ತಲೆತಗ್ಗಿಸು ವಂತೆ ಮಾಡುತ್ತದೆ. ಅದೇ ಪುಸ್ತಕ ನಿಮ್ಮನ್ನು ಜೀವನದಲ್ಲಿ ತಲೆಯೆತ್ತುವಂತೆ ಮಾಡುತ್ತದೆ. ದೇವರು ದೇವಸ್ಥಾನದಲ್ಲಿ ಇಲ್ಲ, ನಾವು ಮಾಡುವ ಕರ್ತವ್ಯದಲ್ಲಿದ್ದಾನೆ. ಎಲ್ಲರ ಆಂತರ್ಯದಲ್ಲೂ ಪರಮಾತ್ಮ ಇರುತ್ತಾನೆ. ಯಾರ ಮನಸ್ಸನ್ನು ನಾವು ನೋಯಿಸದಂತೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಬಲ್ಕಿಷ್ ಬಾನು ಮಾತನಾಡಿ, ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಉದ್ಧಾರವಾಗೋದು ಎನ್ನುವ ಭ್ರಮೆಯಿಂದ ವಿದ್ಯಾರ್ಥಿಗಳು ಹೊರಬರಬೇಕು. ಓದು, ಪಠ್ಯೇತರ ಚಟುವಟಿಕೆಗಳ ಜೊತೆಗೆ ಮೌಲ್ಯಾಧಾರಿತ ಬದುಕಿನ ದಾರಿಯಲ್ಲಿ ವಿದ್ಯಾರ್ಥಿಗಳು ಸಾಗಬೇಕು. ಆಗ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.ಕಾಲೇಜು ಶಿಕಣ ಇಲಾಖೆಯ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕರಾದ ಪ್ರೊ.ವಿಷ್ಣುಮೂರ್ತಿ ಮಾತನಾಡಿ, ಯವಜನತೆ ಉತ್ತಮ ದೇಹಬಲದ ಜೊತೆಗೆ ಮನೋಬಲವನ್ನು ಹೊಂದಿರಬೇಕು. ನೈತಿಕತೆ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗುವುದರಿಂದ ಉತ್ತಮ ನಾಳೆಗಳು ನಿಮ್ಮದಾಗುತ್ತವೆ ಎಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ವಿಜೇತ ಮುನೀರ್ ಬಾಷ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಜಿ.ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ. ಸಕ್ರೀನಾಯ್ಕ ಪ್ರಾಸ್ತಾವಿಕ ಮಾತು ಗಳೊಂದಿಗೆ ಸ್ವಾಗತಿಸಿದರು.
ವೇದಿಕೆಯಲ್ಲಿ ವಿವಿಧ ವೇದಿಕೆಯ ಸಂಚಾಲಕ ಡಾ.ಟಿ.ಎಂ.ಸುರೇಶ್, ಡಾ.ಎಸ್.ಎಚ್.ಪ್ರಸನ್ನ, ಜಯಕೀರ್ತಿ, ಡಾ. ರೇಷ್ಮಾ, ಡಾ.ಸೋಮಶೇಖರ್, ಡಾ.ಚಂದ್ರಶೇಖರ್, ಸುಧಾಕರ್, ಕೆ.ಪಿ.ಪವಿತ್ರ ಇದ್ದರು. ಲಾವಣ್ಯ ಹುರಳಿ ಮತ್ತು ಪ್ರಶಾಂತ ನಿರೂಪಿಸಿ, ಕಸ್ತೂರಿ ಪ್ರಾರ್ಥಿಸಿ, ಡಾ.ಅಣ್ಣಪ್ಪ ಎನ್. ಮಳೀಮಠ್ ವಂದಿಸಿದರು.