ಸಾರಾಂಶ
ಪ್ರತಿಯೊಬ್ಬರು ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಸಾಗಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪ್ರತಿಯೊಬ್ಬರು ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಸಾಗಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷೆ ಡಾ. ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದರು.ತಾಲೂಕಿನ ಮ್ಯಾದನೇರಿ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ದಶಮಾನೋತ್ಸವ ಸಂಗೀತ ಸಂಭ್ರಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅವಕಾಶಗಳು ನಮ್ಮನ್ನು ಹುಡುಕಿ ಬಂದಾಗ ನಮ್ಮಲ್ಲಿರುವ ಕಲೆಯಿಂದ ಅದನ್ನು ಸದುಪಯೋಗ ಪಡಿಸಿಕೊಂಡು ಕಲಾವಿದರು ಬೆಳಕಿಗೆ ಬರಬೇಕು ಎಂದರು.
ನಾವು ಯಾವತ್ತು ಅವುಗಳನ್ನು ಬೆನ್ನತ್ತಿ ಹೋಗುವುದಕ್ಕಿಂತ ಅವು ನಮ್ಮನ್ನು ಹುಡುಕಿಕೊಂಡು ಬರುವ ಸುವರ್ಣವಕಾಶವನ್ನು ಕಾಯುವ ತಾಳ್ಮೆ ಬೆಳೆಸಿಕೊಂಡು ನಮ್ಮ ಪ್ರತಿಭೆ ಅನಾವರಣಗೊಳಿಸಬೇಕು. ಜನಪದ ಕಲೆ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.ಕುದರಿಮೋತಿ ಮೈಸೂರು ಸಂಸ್ಥಾನ ಮಠದ ಶ್ರೀ ವಿಜಯ ಮಹಾಂತ ಸ್ವಾಮೀಜಿ ಮಾತನಾಡಿ, ಸಂಗೀತಕ್ಕೆ ಇರುವ ಅಗಾಧ ಶಕ್ತಿ ಬೇರ‍್ಯಾವುದಕ್ಕೂ ಇಲ್ಲ. ಇದರಿಂದ ಬದುಕುನ್ನು ಕಟ್ಟಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮ್ಯಾದನೇರಿ ಗ್ರಾಮ ಕಲೆಯ ತವರೂರಾಗಿದೆ ಎಂದರು.ಸನ್ಮಾನ:
ಶ್ರೀ ವಿಜಯಮಹಾಂತ ಸ್ವಾಮೀಜಿ, ಯರದಮ್ಮನಹಳ್ಳಿ ಭಾಗ್ಯಮ್ಮ ಜೋಗತಿ, ಪ್ರಮುಖರಾದ ಆದಯ್ಯಸ್ವಾಮಿ ಹಿರೇಮಠ, ಬಸಲಿಂಗಯ್ಯ ಹಿರೇಮಠ, ನೀಲಪ್ಪ ಚುಕ್ಕಾಡಿ, ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಹಾಲಯ್ಯ ಹುಡೆಜಾಲಿ, ಚಿಕ್ಕಮ್ಯಾಗೇರಿ ಗ್ರಾಮದ ಗಡಿ ರಕ್ಷಣಾ ಪಡೆಯ ನಿವೃತ್ತ ಯೋಧ ಶಿವಶಂಕ್ರಪ್ಪ ಮೆಣಸಗೇರಿ, ರಾಜ್ಯ ಕೃಷಿ ಪ್ರಶಸ್ತಿ ವಿಜೇತ ರಸೂಲ್‌ಸಾಬ್ ದಮ್ಮೂರು, ಜಾನಪದ ಅಕಾಡೆಮಿ ನಿಕಟಪೂರ್ವ ಸದಸ್ಯ ಎಚ್.ಚಂದ್ರಶೇಖರ ಲಿಂಗದಳ್ಳಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಲಕ್ಷ್ಮಣ ಪೀರಗಾರ ಹಾಗೂ ಕಲಾವಿದರಿಗೆ ಹಾಗೂ ಗ್ರಾಮದ ಗಣ್ಯರಿಗೆ ಸನ್ಮಾನಿಸಲಾಯಿತು.ಬಳಿಕ ಶಾಸ್ತ್ರೀಯ ಸಂಗೀತ, ಜನಪದ, ಸುಗಮ ಸಂಗೀತ, ತತ್ವಪದಗಳು, ರಂಗಗೀತೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘದ ಅಧ್ಯಕ್ಷ ಫಕೀರಪ್ಪ ಹೊಸೂರು, ಕಾರ್ಯದರ್ಶಿ ಡಿ.ಎಸ್. ಪೂಜಾರ್, ಗ್ರಾಮದ ಗುರು ಹಿರಿಯರು ಸೇರಿದಂತೆ ಮತ್ತಿತರರು ಇದ್ದರು.