ಗುರುಗಳ ವಾಕ್ಯ ಪಾಲನೆಯಿಂದ ಸಾಧನೆ ಸಾಧ್ಯ

| Published : May 27 2024, 01:08 AM IST

ಸಾರಾಂಶ

ಹಳೆಯ ಶಿಕ್ಷಕರು 24 ಕ್ಯಾರೆಟ್(ಗಟ್ಟಿ) ಚಿನ್ನವಿದ್ದಂತೆ,ಆ ಕಾಲದ ಶಿಕ್ಷಕರು ತಮ್ಮಲ್ಲಿಯ ವಿದ್ವತ್ತನ್ನು ತಮ್ಮ ಶಿಷ್ಯೆ ಬಳಗಕ್ಕೆ ಧಾರೆ ಎರೆಯಲು ಶ್ರಮಿಸುತ್ತಿದ್ದರು

ಗದಗ: ಗುರುಗಳ ವಾಕ್ಯ ಪಾಲಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿ ಈ ಸಮಾಜದಲ್ಲಿ ಗುರುತಿಸಿಕೊಂಡಿದ್ದಾನೆ. ಅಂತಹ ಗುರುಗಳನ್ನು ಗೌರವಿಸುವ ಈ ಗುರುವಂದನಾ ಕಾರ್ಯಕ್ರಮ ಸ್ತುತ್ಯಾರ್ಹವಾಗಿದೆ ಎಂದು ಗದಗ ವಿದ್ಯಾದಾನ ಸಮಿತಿಯ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಡಿ.ಎಲ್. ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿಯ ಜನತಾ ವಿದ್ಯಾವರ್ಧಕ ಸಂಸ್ಥೆಯ ಬಿ.ಎಚ್.ಪಾಟೀಲ ಪದವಿ ಪೂರ್ವ ಕಾಲೇಜ ಸಭಾಭವನದಲ್ಲಿ 1978-79-80 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಬಳಗವು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ, ಸಹೋದರ, ಸಹೋದರಿಯರ ಪುನರ್ಮಿಲನ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಹಳೆಯ ಶಿಕ್ಷಕರು 24 ಕ್ಯಾರೆಟ್(ಗಟ್ಟಿ) ಚಿನ್ನವಿದ್ದಂತೆ,ಆ ಕಾಲದ ಶಿಕ್ಷಕರು ತಮ್ಮಲ್ಲಿಯ ವಿದ್ವತ್ತನ್ನು ತಮ್ಮ ಶಿಷ್ಯೆ ಬಳಗಕ್ಕೆ ಧಾರೆ ಎರೆಯಲು ಶ್ರಮಿಸುತ್ತಿದ್ದರು. ಅವರ ಕಾಳಜಿ, ಪ್ರೀತಿ, ಸಂಬಂಧಗಳು ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದ್ದವು. ಅಂದಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಾಕಿದ ಭದ್ರ ಬುನಾದಿಯೇ ಇಂದು ತಾವುಗಳೆಲ್ಲರೂ ಉತ್ತಮ ಹುದ್ಧೆ ಅಲಂಕರಿಸಲು ಸಾಧ್ಯವಾಗಿದೆ. ಅವರ ಆದರ್ಶ ಗುಣಗಳೇ ಇಂದು ತಾವೆಲ್ಲರೂ ಸೇರಿ 44 ವರ್ಷದ ನೆನಪನ್ನು ಮತ್ತೆ ಪುನರ್ಮಿಲನ ಆಗುವಂತೆ ಮಾಡಿದ್ದು ತಮ್ಮೆಲ್ಲರ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಕಾರಣರಾದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

44 ವರ್ಷದ ತಮ್ಮೆಲ್ಲರ ಅನುಭವದ ಈ ಗುರುವಂದನಾ ಕಾರ್ಯಕ್ರಮ ಉತ್ಸವವಾಗಿ ಪರಿಣಮಿಸಿದೆ. ಆರೋಗ್ಯವಂತ ಸಮಾಜ ನಿರ್ಮಾಣದ ಹಿಂದೆ ತಂದೆ,ತಾಯಿ, ಗುರುವಿನ ಪಾತ್ರ ದೊಡ್ಡದಾಗಿದೆ. ತಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ ಭವಿಷ್ಯ ರೂಪಿಸಲು ಕಾರಣರಾದ ಶಿಕ್ಷಕರನ್ನು ಗುರುತಿಸಿ ಗೌರವ ಸಲ್ಲಿಸುವ ಈ ಸಂಪ್ರದಾಯ ಬೆಳೆಯಬೇಕಾಗಿದ್ದು, ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಹಾಯ ಸಹಕಾರ ನೀಡಿ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಜನತಾ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಐ.ಎನ್.ಕುಂಬಾರ ಮತ್ತು ನಿರ್ದೇಶಕ ವಿ.ವಿ.ಗಂಧದ ವಿನಂತಿಸಿಕೊಂಡರು.

44 ವರ್ಷ ಪೂರೈಸಿದ ಪ್ರೌಢಶಾಲೆ ವಿದ್ಯಾರ್ಥಿಗಳ ಈ ನೆನಪು 50 ವರ್ಷಕ್ಕೆ ಮತ್ತೊಮ್ಮೆ ತಾವೆಲ್ಲರೂ ಮಿಲನವಾಗಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಇದಕ್ಕೆ ಸಂಸ್ಥೆಯು ಸಹಕಾರ ನೀಡುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಸಂಸ್ಥೆ ಉಪಾಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ವಿನಂತಿಸಿಕೊಂಡರು.

ನಿವೃತ್ತ ಶಿಕ್ಷಕ ಯು.ಎಸ್. ಬೆಂತೂರ ಹಾಗೂ ವಿ.ಐ. ಬಡಿಗೇರ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಷ್ಯರು ನಮ್ಮ ಮೇಲೆ ಇಟ್ಟ ಗೌರವಕ್ಕೆ ನಮ್ಮಲ್ಲಿ ಆನಂದ ಭಾಷ್ಪಗಳು ತುಂಬಿವೆ. ಶಿಷ್ಯರ ಆಯುಷ್ಯ, ಆರೋಗ್ಯ ಚೆನ್ನಾಗಿರಲಿ ಎಂದು ಹಾರೈಸಿದರು.

ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ ಮಾತನಾಡಿದರು. ಪ್ರಾಚಾರ್ಯ ಬಿ.ವಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಗರಾಜ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮಾ ದೇಶಪಾಂಡೆ, ಸಂದ್ಯಾ ಹೆಬಸೂರು ಪ್ರಾರ್ಥಿಸಿದರು. ಅಬ್ದುಲ್‌ರಜಾಕ ಯರಗುಡಿ ಸ್ವಾಗತಿಸಿದರು. ಬಸವರಾಜ ಹಡಗಲಿ ವಂದಿಸಿದರು.