ಸಾರಾಂಶ
ಮುಂಡರಗಿ: ವಿದ್ಯಾರ್ಥಿಗಳು, ಯುವಕರು ಕನಸು ಕಂಡರೆ ಸಾಲದು. ಕಂಡ ಕನಸನ್ನು ಬೆನ್ನಟ್ಟಿ ಕೆಲಸ ಮಾಡುವ ಮೂಲಕ ಅದನ್ನು ನನಸಾಗಿಸಿಕೊಂಡಾಗ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ಹೈಕೋರ್ಟ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದರು.
ಅವರು ಜ.ಅ.ವಿದ್ಯಾ ಸಮಿತಿ ಶತಮಾನೋತ್ಸವ ಸಮಿತಿ, ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗ ಮುಂಡರಗಿ, ಹಳೆಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಹಾಗೂ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದರು.ನಮಗೆ ಇನ್ನೊಬ್ಬರು ಪ್ರೇರಣೆಯಾಗಬಾರದು. ನಮಗೆ ನಾವೇ ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಏಕಚಿತ್ತ ಹಾಗೂ ಅಚಲವಾದ ಆತ್ಮವಿಶ್ವಾಸದಿಂದ ಸಾಧನೆಯ ಶಿಖರ ಏರಲು ಸಾಧ್ಯವಾಗುತ್ತದೆ. ನಿಮ್ಮ ಶಕ್ತಿಯ ಮೇಲೆ ನಿಮಗೆ ಭರವಸೆ ಇರಬೇಕು. ಅಸಾಧ್ಯ ಎನ್ನುವುದು ನನಗಿಲ್ಲ ಎನ್ನುವ ಭಾವ ನಿಮ್ಮಲ್ಲಿ ಮೂಡಬೇಕು. ಎಲ್ಲವೂ ನನ್ನಿಂದ ಸಾಧ್ಯ ಎಂದು ಸದಾ ಮುನ್ನಡೆಯಬೇಕು. ಅಂದಾಗ ಯಶಸ್ಸು ತಾನಾಗಿಯೇ ನಿಮ್ಮನ್ನು ಬೆನ್ನಟ್ಟಿ ಬರುತ್ತದೆ ಎಂದರು.
ಹೂವಿನ ಹಡಗಲಿ ಜಿಬಿಆರ್ ಕಾಲೇಜ ಪ್ರಾಚಾರ್ಯ ಎಸ್.ಎಸ್.ಪಾಟೀಲ ಮಾತನಾಡಿ, ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಕ.ರಾ.ಬೆಲ್ಲದ ಮಹಾ ವಿದ್ಯಾಲಯವು ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು, ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಿದ ಕೀರ್ತಿ ಈ ನಾಡಿನ ವಿರಕ್ತ ಮಠಗಳಿಗೆ ಸಲ್ಲುತ್ತದೆ. ಲಿಂ.ಹಾನಗಲ್ಲ ಗುರುಕುಮಾರ ಶಿವಯೋಗಿಗಳಿಂದ ಪ್ರೇರಣೆಯಾಗಿ ಒಂದು ಸರ್ಕಾರ ಮಾಡಬೇಕಾದಂತಹ ಕಾರ್ಯವನ್ನು 100 ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಗಳು ಅದರಲ್ಲಿಯೂ ವಿಶೇಷವಾಗಿ ವಿರಕ್ತ ಮಠಗಳು ಮಾಡಿವೆ. ಅದರಲ್ಲಿ ಮುಂಡರಗಿ ಅನ್ನದಾನೀಶ್ವರ ಮಠವೂ ಸಹ ಮುಂಚೂಣಿಯಲ್ಲಿದೆ ಎಂದರು.ಜ.ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಕಷ್ಟು ತೊಂದರೆಗಳಿದ್ದರೂ ಈ ಭಾಗದ ವಾತಾವರಣ ಗಮನಿಸಿ ಶ್ರೀಮಠದಿಂದ ವಿದ್ಯಾಸಂಸ್ಥೆ ಪ್ರಾರಂಭಿಸುವ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ಪ್ರಾರಂಭಿಸಲಾಯಿತು. ನಂತರದ ದಿನಗಳಲ್ಲಿ ಪದವಿ ಕಾಲೇಜು ಸೇರಿದಂತೆ ಇನ್ನಿತರ ಶಿಕ್ಷಣ ಸಹ ಪ್ರಾರಂಭಿಸಲಾಯಿತು. ಇಲ್ಲಿನ ಅನೇಕ ವಿದ್ಯಾರ್ಥಿಗಳು ಇಂದು ದೊಡ್ಡ ದೊಡ್ಡ ಹುದ್ದೆ ಅಲಂಕರಿಸುವ ಮೂಲಕ ಉತ್ತಮ ಸಾಧನೆ ಮಾಡಿ ಸಾರ್ಥಕ ಜೀವನ ನಡೆಸುತ್ತಿದ್ದಾರೆ ಎಂದರು.
ಮಹಾವಿದ್ಯಾಲಯದ ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಆರ್.ಎಲ್.ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆರ್.ಆರ್.ಹೆಗ್ಗಡಾಳ, ಎ.ಕೆ.ಬೆಲ್ಲದ, ಎಂ.ಎಸ್. ಶಿವಶೆಟ್ಟರ್, ನಾಗೇಶ ಹುಬ್ಬಳ್ಳಿ, ಪ್ರಾ.ಡಾ.ಡಿ.ಸಿ.ಮಠ ಉಪಸ್ಥಿತರಿದ್ದರು. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಆರ್.ಎಚ್. ಜಂಗನವಾರಿ ಸ್ವಾಗತಿಸಿ, ಡಾ. ಸಂತೋಷ ಹಿರೇಮಠ ನಿರೂಪಿಸಿದರು.