ಸಾರಾಂಶ
ಬಳ್ಳಾರಿ: ವಿದ್ಯಾರ್ಥಿಗಳು ಸೃಜನಶೀಲತೆ ಮೈಗೂಡಿಸಿಕೊಂಡಲ್ಲಿ ಮಾತ್ರ ಸ್ಪರ್ಧಾತ್ಮಕವಾದ ಇಂದಿನ ದಿನಗಳಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಲೇಖಕ ಸಿದ್ದರಾಮ ಕಲ್ಮಠ ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ ‘ಚಿಲುಮೆ‘ ವಿದ್ಯಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.ಸೃಜನಶೀಲತೆ ಹಾಗೂ ನಾವಿನ್ಯತೆ ಯಶಸ್ಸಿನ ಪೂರಕ ಕೌಶಲ್ಯಗಳಾಗಿದ್ದು, ಹೊಸ ಹೊಸ ಆಲೋಚನೆಗಳ ಮೂಲಕ ಸೃಜನಾತ್ಮಕ ಅಭಿವ್ಯಕ್ತಿಗೆ ಅವಕಾಶಗಳನ್ನು ಕಲ್ಪಿಸಿಕೊಳ್ಳಬೇಕು. "ಚಿಲುಮೆ " ವಿಶೇಷ ಸಂಚಿಕೆ ಕಾಲೇಜಿನ ಸೃಜನಶೀಲತೆ ಮತ್ತು ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ವಿದ್ಯಾರ್ಥಿಗಳಿಗೆ ಬರವಣಿಗೆ ಹವ್ಯಾಸ ರೂಢಿಸಿಕೊಳ್ಳಲು ಇದು ಪ್ರೇರಣೆ ನೀಡುತ್ತದೆ. ಈ ಸಂಚಿಕೆಯಲ್ಲಿ ವಿಷಯ ಮತ್ತು ಭಾಷಾ ವೈವಿಧ್ಯತೆ ಕಾಣಬಹುದು. ಅರಿವಿನ ಕೊರತೆಯನ್ನು ನೀಗಿಸುವಲ್ಲಿ ಇದು ಸಾರ್ಥಕ ಕೆಲಸ ಮಾಡುವಂತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ನಿರೀಕ್ಷಿತ ಉತ್ಸಾಹ, ಲವಲವಿಕೆ, ಸೃಜನಶೀಲತೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದ ಸಿದ್ದರಾಮ ಕಲ್ಮಠ ಅವರು, ನಾಳಿನ ದಿನಗಳಲ್ಲಿ ಸೃಜನಶೀಲ ಮನೋಭಾವ ರೂಢಿಸಿಕೊಂಡು ಪ್ರತಿಭೆ ಮೆರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಸಂಚಿಕೆ ವಿದ್ಯಾರ್ಪಣೆ ಮಾಡಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಯರಾಮ, ಯುವ ಸಮುದಾಯ ಉತ್ತಮ ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳುವ ಜತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಪ್ರಹ್ಲಾದ ಚೌದ್ರಿ, ಇಂತಹ ಸಂಚಿಕೆಗಳು ವಿದ್ಯಾರ್ಥಿಗಳಿಗೆ ಹೊಸ ಸ್ಫೂರ್ತಿ, ಪ್ರೇರಣೆ ನೀಡುತ್ತವೆ ಎಂದರು.ಕಾಲೇಜಿನ ಅಭಿವೃದ್ಧಿ ಮಂಡಳಿ ಸದಸ್ಯರಾದ ವಿಶ್ವನಾಥ ನಾಯಕ, ಧರ್ಮಶ್ರೀ, ರಾಮಕೃಷ್ಣ, ಸಲ್ಮಾ ಎಸ್.ಕೆ., ಸಿ.ಎ. ಕೋಮಲ ಜೈನ್, ಅಧ್ಯಾಪಕ ದಸ್ತಗೀರಸಾಬ್ ದಿನ್ನಿ ಇದ್ದರು. ಪ್ರಾಧ್ಯಾಪಕ ಡಾ. ಹೊನ್ನೂರಾಲಿ ಐ ಅವರು ಪ್ರಾಸ್ತಾವಿಕ ಮಾತನಾಡಿದರು. ಡಾ. ಗುರುಬಸಪ್ಪ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.