ಅಧ್ಯಯನಶೀಲತೆ ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯ: ಮಾಲತೇಶ

| Published : Jan 21 2024, 01:37 AM IST

ಸಾರಾಂಶ

ಅಧ್ಯಯನಶೀಲತೆ ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲಿಯೇ ಮೈಗೂಡಿದರೆ ಬರುವ ಎಲ್ಲ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ.

ಕನ್ನಡಪ್ರಭವಾರ್ತೆ ಹಾನಗಲ್ಲ

ಅಧ್ಯಯನಶೀಲತೆ ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲಿಯೇ ಮೈಗೂಡಿದರೆ ಬರುವ ಎಲ್ಲ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ, ಅದಕ್ಕಾಗಿ ಸಕಾಲಿಕ ಪರಿಶ್ರಮವೂ ಬೇಕು ಎಂದು ಆಡೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಸಿ. ಮಾಲತೇಶ ತಿಳಿಸಿದರು.

ತಾಲೂಕಿನ ಆಡೂರು ಕೆಪಿಎಸ್ ಸಂಯುಕ್ತ ಶಾಲೆಯಲ್ಲಿ ಬೆಂಗಳೂರಿನ ಡ್ರೀಮ್ ಸ್ಕೂಲ್ ಫೌಂಡೇಶನ್ ಹಾಗೂ ಧಾರವಾಡದ ಪರಿವರ್ತನ ಕಲಿಕಾ ಕೇಂದ್ರ ಸಂಯುಕ್ತವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಎಸ್‌ಎಸ್‌ಎಲ್‌ಸಿ ನಂತರದ ವೃತ್ತಿ ಮಾರ್ಗದರ್ಶನ ಅವಕಾಶಗಳು ಹಾಗೂ ಪರೀಕ್ಷಾ ಸಿದ್ಧತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಇಂಥ ಶಿಕ್ಷಣವನ್ನು ಉಚಿತವಾಗಿ ಆಯೋಜಿಸುವ ಮೂಲಕ ಶಾಸಕ ಶ್ರೀನಿವಾಸ ಮಾನೆ ಶೈಕ್ಷಣಿಕ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟಣದ ಮಕ್ಕಳಿಗೆ ಸಿಗುವ ಶೈಕ್ಷಣಿಕ ಸೌಲಭ್ಯಗಳು ಗ್ರಾಮೀಣ ಮಕ್ಕಳಿಗೆ ಸಿಕ್ಕಲ್ಲಿ ಅತ್ಯುತ್ತಮ ಪ್ರತಿಭಾವಂತರಿಗೆ ಒಳ್ಳೆಯ ಅವಕಾಶ ನೀಡಿದಂತಾಗುತ್ತದೆ ಎಂದರು.

ಪರಿವರ್ತನಾ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಗುರು ಮತ್ತು ಗುರಿಯಿಲ್ಲದ ಯಶಸ್ಸು ಸಾಧಿಸುವುದು ಕಷ್ಟ. ಬೆರಳ ತುದಿಯಲ್ಲಿ ಎಲ್ಲ ಮಾಹಿತಿ ಪಡೆಯುವ ಜಾಗತಿಕ ಕಾಲದಲ್ಲಿ ನಡೆದಿರುವ ಸ್ಪರ್ಧೆ ಎದುರಿಸಬೇಕು. ಅದಕ್ಕಾಗಿ ನಾವು ಸಿದ್ಧರಾಗಬೇಕು. ನಾಳೆಗಳು ವ್ಯಕ್ತಿಯ ಸಾಮರ್ಥ್ಯ ಆಧಾರಿತ ಅವಕಾಶಗಳನ್ನು ನೀಡುವ ಕಾಲವಾಗಿದೆ. ನಾಳೆಗಾಗಿ ಇಂದೇ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮೀಣ ಮಕ್ಕಳು ಕೀಳರಿಮೆಯಿಂದ ಹೊರಬಂದು ತಮ್ಮ ಪ್ರತಿಭೆಯನ್ನು ಬೆಳಗಿಸಿಕೊಳ್ಳಬೇಕು ಎಂದರು.

ಉಪಪ್ರಾಚಾರ್ಯ ಮೋಹನ್ ನಾಯ್ಕ ಅತಿಥಿಯಾಗಿ ಮಾತನಾಡಿ, ಒಳ್ಳೆಯ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದೇ ವಿದ್ಯಾರ್ಥಿಯ ಸಲ್ಲಕ್ಷಣ. ಗ್ರಾಮ ಮಟ್ಟದ ಮಕ್ಕಳಿಗೆ ಒಳ್ಳೆಯ ಅವಕಾಶಗಳನ್ನು ನೀಡಿದರೆ ಎತ್ತರಕ್ಕೆ ಬೆಳೆಯಬಲ್ಲರು. ಅಂಥ ಅವಕಾಶ ನೀಡಿದ ಶಾಸಕ ಶ್ರೀನಿವಾಸ ಮಾನೆ ಅವರ ಪ್ರಯತ್ನ ನಿಜಕ್ಕೂ ತಾಲೂಕಿನ ಮಕ್ಕಳಿಗೆ ಶೈಕ್ಷಣಿಕ ಸ್ಪೂರ್ತಿ ತುಂಬಿದೆ ಎಂದರು.

ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಎಫ್.ಸಿ. ಬಾಳಿಕಾಯಿ, ಡ್ರೀಮ್ ಸ್ಕೂಲ್‌ ಫೌಂಡೇಶನ್‌ನ ಅರುಣಕುಮಾರ ಬಾರ್ಕಿ, ಮಂಗಳಾ ಮಠದ, ಮಂಜುನಾಥ ಬಾರ್ಕಿ, ಶಿಕ್ಷಕರಾದ ಐ.ಎಚ್. ಸಿದ್ದಣ್ಣನವರ, ವಿ.ವಿ. ಮಾಳಿ, ಮೋಹನ ಪವಾರ, ಎಚ್.ಎಸ್. ಚಂದ್ರಶೇಖರ, ಭೀಮಾಬಾಯಿ ಕಾಂಬಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.