ತರೀಕೆರೆ ಮಹಿಳೆಯರು ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕಿ ಗೀತಾ ಹೇಳಿದ್ದಾರೆ.
-ತರೀಕೆರೆಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ತರೀಕೆರೆಮಹಿಳೆಯರು ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕಿ ಗೀತಾ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ತರೀಕೆರೆ ಯಿಂದ ಪಟ್ಟಣದನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರ ಸಬಲೀಕರಣಕ್ಕೆ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗುತ್ತಿದೆ, ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಜಾಗೃತಿ ಹಾಗೂ ಕಾನೂನು ಅರಿವು ಸೇರಿದಂತೆ ವಿವಿಧ ಕಾರ್ಯಕ್ರಮ ಪ್ರತಿ ಕೇಂದ್ರದಲ್ಲೂ ನಡೆಸಲಾಗುತ್ತಿದೆ ಎಂದು ಹೇಳಿದರು.
ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧ್ಯ, ಆತ್ಮವಿಶ್ವಾಸ, ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಮುನ್ನಡೆದರೆ ಕುಟುಂಬದ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸುವ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲೂ ಸಾಧನೆ ಮಾಡಬಹುದು. ಮಹಿಳೆಯರು ತಮ್ಮಲ್ಲಿನ ಪ್ರತಿಭೆ ಮತ್ತು ಸಾಮರ್ಥ್ಯ ಗುರುತಿಸಿ ಸ್ವಾವಲಂಬಿ ಗಳಾಗಿ ಮುನ್ನಡೆಯಬೇಕು ಎಂದು ಹೇಳಿದರು.ಮಕ್ಕಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಪೋಷಕರು ಅರಿವು ಮೂಡಿಸ ಬೇಕು.ಅವರಲ್ಲಿ ಧಾರ್ಮಿಕ ಚಿಂತನೆ, ಉತ್ತಮ ಮೌಲ್ಯಗಳನ್ನ ಬೆಳೆಸಿದಲ್ಲಿ ಜವಾಬ್ದಾರಿಯುತ ಪ್ರಜೆಯಾಗುವರು ಎಂದು ಹೇಳಿದರು.
ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಯಿಂದ ಕಾರ್ಯಕ್ರಮ ಆಯೋಜಿಸುತ್ತಿರುವುದು ಪ್ರಶಂಸನೀಯ. ಗ್ರಾಮೀಣ ಮಹಿಳೆಯರಿಗೆ ಕಾನೂನು ಅರಿವು, ಆರೋಗ್ಯ ಹಾಗೂ ಆರ್ಥಿಕ ಸ್ವಾವಲಂಬನೆ ಕುರಿತು ಕಾರ್ಯಕ್ರಮ ರಾಜ್ಯಕ್ಕೆ ಮಾದರಿ ಎಂದು ಹೇಳಿದರು.ಕೆ.ಎಲ್.ಕೆ. ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜಿ.ವಿ. ಭಾಗ್ಯ ಮಲ್ಲೇಶ್ ಮಾತನಾಡಿ ಸೃಷ್ಟಿಯ ಮೂಲ ಹೆಣ್ಣು. ಹೆಣ್ಣು ಕೇವಲ ಒಂದು ಕುಟುಂಬದ ಆಧಾರವಲ್ಲ, ತಾಯಿಯಾಗಿ ಜೀವಕ್ಕೆ ಜನ್ಮ ನೀಡುವ ಆಕೆ, ಮಗಳಾಗಿ ಮಮತೆ, ಸಹೋದರಿಯಾಗಿ ಪ್ರೀತಿ, ಪತ್ನಿಯಾಗಿ ಸಹಕಾರ ಹಾಗೂ ಸಮಾಜದ ನಿರ್ಮಾಣದಲ್ಲಿ ಶಕ್ತಿಯಾಗಿ ನಿಂತಿದ್ದಾಳೆ. ಹೆಣ್ಣಿನ ತ್ಯಾಗ, ಧೈರ್ಯ ಮತ್ತು ಸಾಧನೆಯಿಂದ ಕುಟುಂಬ, ಸಮಾಜ ಬೆಳೆಯುತ್ತದೆ ಎಂದು ಹೇಳಿದರು.
ಚಿಕ್ಕಮಗಳೂರು ಕಜಾಪ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ವಿಶಾಲಾಕ್ಷ್ಮಮ್ಮ ಎಂ.ಎಸ್. ಮಾತನಾಡಿ, ಮಹಿಳೆಯರು ಕುಟುಂಬದ ಪ್ರಮುಖ ಆಧಾರಸ್ತಂಭ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ತಾಯಂದಿರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಪರಂಪರೆ ಹಾಗೂ ಜೀವನ ಮೌಲ್ಯಗಳ ಬಗ್ಗೆ ಬಾಲ್ಯದಿಂದಲೇ ತಿಳಿಹೇಳಬೇಕು. ಹಿರಿಯರನ್ನು ಗೌರವಿಸುವುದು, ಕುಟುಂಬದವರೊಂದಿಗೆ ಪ್ರೀತಿ ಹಾಗೂ ಸಹಬಾಳ್ವೆಯಿಂದ ನಡೆದು ಕೊಳ್ಳುವುದನ್ನು ಬೆಳೆಸಬೇಕು ಎಂದು ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ನೀಡಲಾಗುವ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಿಸಲಾಯಿತು. ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಮತ್ತಿತರರು ಭಾಗವಹಿಸಿದ್ದರು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ನೃತ್ಯ ಸ್ಪರ್ಧೆ ಹಾಗೂ ಹೂಗುಚ್ಛ ಸ್ಪರ್ಧೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
--15ಕೆಟಿಆರ್.ಕೆ.20 ತರೀಕೆರೆಯಲ್ಲಿ ನಡೆದ ಮಹಿಳಾ ವಿಚಾರ ಗೋಷ್ಠಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ಗೀತಾ ಉದ್ಘಾಟಿಸಿದರು. ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್, ಕಜಾಫ ಮಹಿಳಾ ಘಟಕ ಚಿಕ್ಕಮಗಳೂರು ಜಿಲ್ಲಾಧ್ಯಕ್ಷೆ ವಿಶಾಲಾಕ್ಷ್ಮಮ್ಮ ಎಂ.ಎಸ್. ಯೋಜನಾಧಿಕಾರಿ ಸದಾಶಿವ ಗೌಡ ಮತ್ತಿತರರು ಇದ್ದರು.