ವಿದ್ಯಾರ್ಥಿಗಳು ಬಹಳ ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸಿಪಿಐ ಲೋಹಿತ್‌ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ವಿದ್ಯಾರ್ಥಿಗಳು ಬಹಳ ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸಿಪಿಐ ಲೋಹಿತ್‌ ಹೇಳಿದರು.

ಪಟ್ಟಣದ ಜೆಪಿ ಕಾನ್ವೆಂಟ್‌ ಮತ್ತು ಜೆಪಿ ಆಂಗ್ಲ ಪ್ರೌಢಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಎಸ್‌ ಎಸ್‌ ಎಲ್‌ ಸಿ ಮತ್ತು ಪಿಯುಸಿ ಮಹತ್ವದ ಘಟ್ಟ. ಈ ಸಂದರ್ಭದಲ್ಲಿ ವಿದ್ಯಾಭ್ಯಾಸವನ್ನೇ ಗುರಿಯಾಗಿಸಿಕೊಂಡು ಏಕಾಗ್ರತೆಯಿಂದ ಓದಿದಲ್ಲಿ ಮುಂದಿನ ಹಂತ ಎಂದಿಗೂ ಕಠಿಣ ಎನಿಸದು ಎಂದರು. ಪೋಷಕರೂ ತಮ್ಮ ಮಕ್ಕಳ ಭವಿಷ್ಯ ಕಟ್ಟಿಕೊಳ್ಳಲು ಮೈಯೆಲ್ಲಾ ಕಣ್ಣಾಗಿರಿಸಿಕೊಂಡಿರಬೇಕು. ಮಕ್ಕಳಿಗೆ ಟಿವಿ ಮತ್ತು ಮೊಬೈಲ್‌ ನ ಗೀಳು ಬಾರದಂತೆ ನೋಡಿಕೊಳ್ಳಬೇಕೆಂದು ಸಿಪಿಐ ಲೋಹಿತ್‌ ಪೋಷಕರಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶೈಕ್ಷಣಿಕ ಆಡಳಿತ ಅಧಿಕಾರಿಗಳಾದ ಡಿ.ಎಚ್ ಲಕ್ಷ್ಮಣಯ್ಯ ಹಾಗೂ ಮುಖ್ಯ ಶಿಕ್ಷಕ ಎಚ್. ಆರ್. ತುಕಾರಾಮ್ ರವರನ್ನು ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 33 ವಿದ್ಯಾರ್ಥಿಗಳನ್ನು ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಜೆ.ಪಿ. ಸಂದೀಪ್, ಡಾ ಸಹನಾ, ಶುಭ ಮಂಜುನಾಥ್, ಬಿ.ಎಸ್. ವೇದಶ್ರೀ ಹಾಗೂ ಎಚ್. ಎಸ್. ಮೇಘಶ್ರೀ ರವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಕಾಶ್‌ ಗುಪ್ತಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಜಿ. ಆರ್.ರಂಗೇಗೌಡ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಸಂಸ್ಥೆಯ ಖಜಾಂಚಿ ಕೆ. ಟಿ. ಶಿವಣ್ಣ, ಸಹ ಕಾರ್ಯದರ್ಶಿ ಟಿ. ಎಸ್. ಲಕ್ಷ್ಮೀನರಸಿಂಹ, ಆಡಳಿತ ಅಧಿಕಾರಿ ನಜೀರ್ ಅಹ್ಮದ್ ಕಾರ್ಯಕಾರಿ ಮಂಡಳಿಯ ನಿರ್ದೇಶಕರಾದ ಟಿ ಎ ವಿ ಗುಪ್ತ, ಜಯಮ್ಮ ಶಿವಶೇಖರೇಗೌಡ ಹಾಗೂ ಗೆಳೆಯರ ಬಳಗದ ಸರ್ವ ಸದಸ್ಯರು ಹಾಜರಿದ್ದರು. ಮುಖ್ಯಶಿಕ್ಷಕ ಎಚ್.ಆರ್ ತುಕಾರಾಮ್ ಸ್ವಾಗತಿಸಿದರು. ಎಚ್ ಬಿ ಪ್ರಕಾಶ್ ನಿರೂಪಿಸಿದರು. ಓಂಕಾರ್ ಮೂರ್ತಿ ವಂದಿಸಿದರು.