ಸಾರಾಂಶ
ಹನೂರು ತಾಲೂಕಿನ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ಸಾಲೂರು ಬೃಹನ್ಮಠದಲ್ಲಿ ಮೈಸೂರಿನ ಚಾಮರಾಜೇಶ್ವರ ಅಕ್ಕನ ಬಳಗದಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಿರಂತರ ಕಲಿಕೆ ಮತ್ತು ಸಂಸ್ಕಾರಯುತ ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ ಹಾಗೂ ಪ್ರಗತಿ ಹೊಂದಲು ಸಾಧ್ಯವಿದೆ. ಅಂಥ ದಾರ್ಶನಿಕರಾದ ಶ್ರೀ ಮಹದೇಶ್ವರರು ನೆಲೆಸಿರುವ ಪುಣ್ಯಭೂಮಿಯಲ್ಲಿ ವ್ಯಾಸಂಗ ಮಾಡುವ ಭಾಗ್ಯ ನಿಮ್ಮದಾಗಿದೆ ಎಂದು ಸಾಹಿತಿ, ವಿಶ್ರಾಂತ ಸಹ ಪ್ರಾಧ್ಯಾಪಕಿ ಡಾ.ಎಸ್.ಪಿ.ಉಮಾದೇವಿ ತಿಳಿಸಿದರು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಮೈಸೂರಿನ ಚಾಮರಾಜೇಶ್ವರ ಅಕ್ಕನ ಬಳಗದಿಂದ ನಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಲೆಮಹದೇಶ್ವರರು ಹಾಗೂ ಸುತ್ತೂರು ಶ್ರೀಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಇದೆ. ಮಹದೇಶ್ವರರು ಸಾಲೂರು ಮಠದಿಂದ ಧರ್ಮ ಪ್ರಚಾರಕ್ಕೆ ಸುತ್ತೂರು ಮಠಕ್ಕೆ ಆಗಮಿಸಿ, ರಾಗಿ ಬೀಸಿರುವುದು. ಸುತ್ತೂರು ಪರಂಪರೆಯನ್ನು ತಿಳಿಸುತ್ತದೆ. ಸಾಲೂರು ಮಠವು ಪ್ರಶಾಂತ ವಾತಾವರಣದಲ್ಲಿದ್ದು, ಡಾ.ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಾನ್ನಿಧ್ಯದಲ್ಲಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಶ್ರೀಗಳ ಸಮಾಜಮುಖಿ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಮಕ್ಕಳು ಪಾಠ ಪ್ರವಚನದ ಜೊತೆಗೆ ಶಿಸ್ತು ಮತ್ತು ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ನಮ್ಮ ಕಾಲದಲ್ಲಿ ಇಂಥ ಸೌಲಭ್ಯಗಳಿರಲಿಲ್ಲ. ಈಗ ಎಲ್ಲಾ ರೀತಿಯ ಸವಲತ್ತುಗಳು ಇವೆ. ಸುತ್ತೂರು ಆಗ ಒಂದು ಹಳ್ಳಿಯಾಗಿತ್ತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಗಿದರೆ ಮದುವೆ, ಸಂಸಾರದ ಜಂಜಾಟ ಶುರುವಾಗುತ್ತೆ. ಇದರ ಹೊರತಾಗಿಯೂ ಜೀವನ ಇದೆ ಎಂಬುದನ್ನು ನಮ್ಮ ಮಹನೀಯರು ಹಾಗೂ ಅಕ್ಕಮಹದೇವಿ ಮಾದರಿಯಾಗಿದ್ದಾರೆ. ಮೈಸೂರಿನ ಚಾಮರಾಜೇಶ್ವರ ಅಕ್ಕನ ಬಳಗದ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು. ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಅಕ್ಕ ಮಹದೇವಿ ಅವರ ಹೆಸರಿನಲ್ಲಿ ಬಳಗವು ಸಮಾಜಮುಖಿಯಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇಂಥ ಹತ್ತು ಹಲವಾರು ಸೇವೆ ಕಾರ್ಯಗಳ ಮಾಡುತ್ತಿರುವ ಬಳಗಕ್ಕೆ ಶ್ರೀಮಹದೇಶ್ವರ ಕೃಪೆ ಸದಾ ಇರಲಿದೆ. ಶ್ರೀಮಠವು ಸಹ ಆಸರೆಯಾಗಲಿದೆ. ವಿಚಾರಗೋಷ್ಠಿ, ಕವಿಗೊಷ್ಠಿ, ಅಕ್ಕ ಮಹದೇವಿ ಅವರ ವಿಚಾರಧಾರೆಗಳ ಕಾರ್ಯಕ್ರಮಗಳಿಗೆ ಸಾಲೂರು ಮಠ ಸಹಕಾರ ಇರುತ್ತದೆ. ಸುತ್ತೂರುಶ್ರೀಗಳ ಕೃಪಾಶೀರ್ವಾದವನ್ನು ಬಳಗ ಈಗಾಗಲೇ ಪಡೆದುಕೊಂಡಿದೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರು ಮುನ್ನಡೆಯೋಣ ಎಂದರು. ಶ್ರೀ ಚಾಮರಾಜೇಶ್ವರ ಅಕ್ಕನ ಬಳಗದ ಅಧ್ಯಕ್ಷೆ ಮಾದಾಲಾಂಬಿಕಾ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಲೂರು ಮಠದಲ್ಲಿ ಬಳಗದ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಸಂತಸ ತಂದಿದೆ. ಚಾ.ನಗರದಿಂದ ಮೈಸೂರಿನಲ್ಲಿ ನೆಲೆಸಿರುವ ನಾವೆಲ್ಲರೂ ಒಂದು ವೇದಿಕೆ ರಚನೆ ಮಾಡಲು ಮುಂದಾದಾಗ ಸುತ್ತೂರುಶ್ರೀಗಳು ಶ್ರೀ ಚಾಮರಾಜೇಶ್ವರ ಅಕ್ಕನ ಬಳಗ ಎಂದು ನಾಮಕರಣ ಮಾಡಿ, ನಿಮ್ಮ ಸೇವೆ ಚಾ.ನಗರ ಜಿಲ್ಲೆಯ ಜನರಿಗೆ ಲಭಿಸಲಿ. ಅಲ್ಲಿನ ಮಕ್ಕಳು ಹಾಗೂ ಬಡವರಿಗೆ ಸೇವಾ ಕಾರ್ಯಗಳು ವಿಸ್ತರಣೆಯಾಗಲಿ ಎಂದು ಆಶೀರ್ವಾದ ಮಾಡಿದರು. ಅದರಂತೆ ನಮ್ಮ ಬಳಗ ಮುನ್ನಡೆಯುತ್ತಿದೆ. ಇಂದು ಸಾಲೂರು ಮಠದಲ್ಲಿ ಮೈಸೂರಿನ ಮಹಾರಾಜ ಎಜುಕೇಷನ್ ಟ್ರಸ್ಟ್ ವತಿಯಿಂದ ಶಾಲೆಯ ೧೦೦ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ, ಡಾಕ್ಟರೇಟ್ ಪದವಿ ಪಡೆದ ಸಾಲೂರುಶ್ರೀಗೆ ಗೌರವ ಸಮರ್ಪಣೆ, ಮತ್ತು ಸಾಹಿತಿ ಡಾ.ಉಮಾದೇವಿ ಅವರಿಗೆ ಗೌರವ ಸನ್ಮಾನ ಮಾಡಲಾಗಿದೆ ಎಂದರು. ಕಾರ್ಯಕ್ರಮವನ್ನು ಗುಂಡೇಗಾಲ ಶಾಖಾ ಮಠದ ಶ್ರೀ ಮಹದೇವಸ್ವಾಮೀಜಿ ಉದ್ಘಾಟಿಸಿದರು. ಅಕ್ಕನ ಬಳಗದ ಕಾರ್ಯದರ್ಶಿ ಪ್ರತಿಮಾ ಮಂಜುನಾಥ್, ಸದಸ್ಯರಾದ ಸುನಿತಾ ಗುರು, ಹಿರಿಯ ಸದಸ್ಯರಾದ ವಿಜಯ ಚಿನ್ನಸ್ವಾಮಿ, ಮಂಗಳಾ ಮುದ್ದುಮಾದಪ್ಪ ಸೇರಿದಂತೆ ಅನೇಕರು ಇದ್ದರು.