ಪ್ರಾಮಾಣಿಕ ಸೇವೆಯಿಂದ ಯಶಸ್ಸು ಸಾಧ್ಯ: ಸಿದ್ದೇಶ್ವರ್

| Published : Apr 18 2025, 12:46 AM IST

ಪ್ರಾಮಾಣಿಕ ಸೇವೆಯಿಂದ ಯಶಸ್ಸು ಸಾಧ್ಯ: ಸಿದ್ದೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಸಂಘ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಕಾರಣ ತುಮ್ಕೋಸ್‌ ಸಂಸ್ಥೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಚ್.ಎಸ್. ಶಿವಕುಮಾರ್ ಅವರ ತಂಡದ ಎಲ್ಲ 15 ಅಭ್ಯರ್ಥಿಗಳೂ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ. ಇದು ಅವರ ಪ್ರಾಮಾಣಿಕತೆಗೆ ಸಂದ ಗೌರವ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್ ಹೇಳಿದ್ದಾರೆ.

- ತುಮ್ಕೋಸ್‌ ಸದಸ್ಯರಿಗೆ ಅಧ್ಯಕ್ಷ ಶಿವಕುಮಾರ್ ತಂಡ ಸದಸ್ಯರಿಂದ ಕೃತಜ್ಞತೆ ಸಮಾರಂಭ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಸಹಕಾರ ಸಂಘ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಕಾರಣ ತುಮ್ಕೋಸ್‌ ಸಂಸ್ಥೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಚ್.ಎಸ್. ಶಿವಕುಮಾರ್ ಅವರ ತಂಡದ ಎಲ್ಲ 15 ಅಭ್ಯರ್ಥಿಗಳೂ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ. ಇದು ಅವರ ಪ್ರಾಮಾಣಿಕತೆಗೆ ಸಂದ ಗೌರವ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್ ಹೇಳಿದರು.

ಗುರುವಾರ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ (ತುಮ್ಕೋಸ್‌) ಸದಸ್ಯರಿಗೆ ನೂತನ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ತಂಡದಿಂದ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದ ಪ್ರಧಾನಿ ನರೇಂದ್ರ ಮೋದಿ ಸಂಘದ ಸಾಧನೆಗೆ ಪರಿಗಣಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವವರೆಗೆ ಅಡಕೆ ಬೆಲೆ ಉತ್ತಮವಾಗಿ ಇರಲಿದೆ. ಬೇರೆ ದೇಶಗಳಿಂದ ಕಳಪೆ ಅಡಕೆ ಬರುತ್ತಿರುವುದನ್ನು ತಡೆಯಲಾಗಿದೆ ಎಂದರು.

ಈ ಸಂಸ್ಥೆಯಲ್ಲಿ ಆರ್.ಎಂ.ರವಿ ಮತ್ತು ಎಚ್.ಎಸ್.ಶಿವಕುಮಾರ್ ತಂಡಗಳು ಒಂದಾಗಿ ತುಮ್ಕೋಸ್‌ ಸಂಸ್ಥೆ ಬೆಳೆಸಿಕೊಂಡು ಹೋಗಬೇಕು. ಈ ಎರಡು ಟೀಂಗಳು ಒಂದಾಗುವಂತೆ ಮಾಡಲು ರಾಜಕಾರಿಣಿಗಳಾದ ನಾವು ಪ್ರಯತ್ನಿಸಬೇಕು ಎಂದರು.

ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ಸಾಸಿವೆಹಳ್ಳಿ ಮತ್ತು ಉಬ್ರಾಣಿ ಏತನೀರಾವರಿ ಯೋಜನೆಯಲ್ಲಿ ಬಿಟ್ಟುಹೋದ 50 ಕೆರೆಗಳಿಗೆ ನೀರು ತುಂಬಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ ₹360 ಕೋಟಿ ಮಂಜೂರು ಮಾಡಿಸಿದ್ದು, ಇದರಲ್ಲಿ ಆರಂಭದ ಹಂತದಲ್ಲಿ ₹100 ಕೋಟಿ ಬಿಡುಗಡೆಯಾಗಿದೆ. ರೈತರಿಗೆ ವಿದ್ಯುತ್ ಸಮಸ್ಯೆ ಆಗದಂತೆ ಸೋಲಾರ್ ಪ್ಲಾಂಟ್ ಮೂಲಕ 33 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಕಾರ್ಯ ಯೋಜನೆ ತಯಾರಾಗಿದೆ ಎಂದರು.

ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ರೈತರಿಗೆ ಅನುಕೂಲ ಆಗುವ ಇಂತಹ ತುಮ್ಕೋಸ್ಸಂ ಶಾಖೆಗಳನ್ನು ದಾವಣಗೆರೆ ಮತ್ತು ಹರಿಹರದಲ್ಲೂ ತೆರೆದು, ಆ ಭಾಗದ ಅಡಕೆ ಬೆಳೆಗಾರರಿಗೆ ಸಹಕಾರಿಯಾಗಬೇಕು ಎಂದರು.

ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, 41 ವರ್ಷಗಳಿಂದ ತುಮ್ಕೋಸ್‌ ಸಂಸ್ಥೆ ಉತ್ತಮವಾಗಿ ಪ್ರಗತಿ ಪಥದತ್ತ ಮುನ್ನಡೆಯಲು ಸಂಸ್ಥೆಯಲ್ಲಿ ಹಲವಾರು ಜನ ಅಧ್ಯಕ್ಷರು, ನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ, ಇದರ ಪರಿಣಾಮ ತುಮ್ಕೋಸ್‌ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ. ಸಂಸ್ಥೆಗೆ ಉತ್ತಮ ಹೆಸರನ್ನು ತರಲು ಅಡಕೆ ರೈತರು ಗುಣಮಟ್ಟದ ಅಡಕೆಗಳನ್ನು ಮಾರಾಟ ಮಾಡಬೇಕು ಎಂದರು.

ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಮಾತನಾಡಿದರು. ನಿರ್ದೇಶಕರಾದ ಗಂಗಾಧರಪ್ಪ, ವಿಜಯಕುಮಾರ್, ಟಿ.ವಿ.ರಾಜು ಪಟೇಲ್, ಎಚ್.ಎಸ್. ಮಂಜುನಾಥ್, ಎಂ.ಮಂಜುನಾಥ್, ಪ್ರಭುಲಿಂಗಪ್ಪ, ಜಿ.ಆರ್. ಶಿವಕುಮಾರ್, ಬಸವರಾಜ್, ಮೀನಾಕ್ಷಿ, ಶೋಭಾ, ಚನ್ನಬಸಪ್ಪ, ಓಂಕಾರಮೂರ್ತಿ, ಲೋಕೇಶ್ವರ್, ಎಸ್.ರಘು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಟಿ.ಜಿ.ಹಳ್ಳಿ ರಾಜಣ್ಣ ಸ್ವಾಗತಿಸಿದರು. ಧನಂಜಯ ನಿರೂಪಿಸಿದರು.

- - -

(ಬಾಕ್ಸ್‌) * ₹25 ಕೋಟಿ ಆದಾಯಕ್ಕೆ ಕಾರ್ಯ ಯೋಜನೆಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಮಾತನಾಡಿ, ಸಂಸ್ಥೆ ಪ್ರಗತಿ ಹೊಂದಲು ಹೈಟೆಕ್ ಮಾದರಿಯ ಆಸ್ಪತ್ರೆ ನಿರ್ಮಿಸಲು ಸ್ಥಳದ ವ್ಯವಸ್ಥೆಯಾಗಿದೆ. ಹಾಗೆಯೇ ರೈತರಿಗೆ ಒಂದೇ ಸೂರಿನಡಿ ಕೃಷಿ ಉಪಕರಣಗಳಿಂದ ಹಿಡಿದು ದಿನಸಿ, ಇನ್ನಿತರೆ ಎಲ್ಲ ವಸ್ತುಗಳು ದೊರೆಯುವಂತೆ ಈಗಾಗಲೇ ಸೂಪರ್ ಮಾರ್ಕೆಟ್ ಮಾಡಲಾಗಿದೆ. ಇನ್ನು ಹೊಸ ಹೊಸ ವ್ಯವಹಾರಗಳಿಂದ ಸಂಸ್ಥೆಗೆ ₹25 ಕೋಟಿ ಆದಾಯ ಬರುವಂತೆ ಕಾರ್ಯ ಯೋಜನೆ ರೂಪುಗೊಂಡಿದೆ ಎಂದರು.

- - -

-17ಕೆಸಿಎನ್‌ಜಿ1: ಕೃತಜ್ಞತಾ ಸಮಾರಂಭ ಉದ್ಘಾಟನೆ ನಡೆಯಿತು.

-17ಕೆಸಿಎನ್ಜಿ2: ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್ ಮಾತನಾಡಿದರು.