ಕ್ರಮಬದ್ಧ ಶ್ರಮದಿಂದ ಯಶಸ್ಸು ಸಾಧ್ಯ: ಹಿಂದಿ ಭಾಷಾ ಸಾಹಿತಿ ರಮೇಶ್ ಬೊಂಗಾಲೆ

| Published : May 15 2024, 01:38 AM IST

ಸಾರಾಂಶ

ಇಂದಿನ ವಿದ್ಯಾರ್ಥಿಗಳಲ್ಲಿ ಶ್ರಮ ಮತ್ತು ಕ್ರಮ ಎರಡೂ ಕೊರತೆಯಿದ್ದು ಅದನ್ನು ಗಳಿಸುವತ್ತ ಗಮನ ಹರಿಸಬೇಕು ಎಂದು ಖ್ಯಾತ ಹಿಂದಿ ಭಾಷಾ ಸಾಹಿತಿ ರಮೇಶ್ ಬೊಂಗಾಲೆ ಅಭಿಪ್ರಾಯಪಟ್ಟರು. ಹಾಸನದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ವಿಶೇಷ ಉಪನ್ಯಾಸ

ಹಾಸನ: ಶ್ರಮ ಎಲ್ಲಿ ಕ್ರಮವಾಗಿರುತ್ತದೋ ಅಲ್ಲಿ ವಿಕ್ರಮ ಶತಸಿದ್ಧ. ಆದರೆ ಇಂದಿನ ವಿದ್ಯಾರ್ಥಿಗಳಲ್ಲಿ ಶ್ರಮ ಮತ್ತು ಕ್ರಮ ಎರಡೂ ಕೊರತೆಯಿದ್ದು ಅದನ್ನು ಗಳಿಸುವತ್ತ ಗಮನ ಹರಿಸಬೇಕು ಎಂದು ಖ್ಯಾತ ಹಿಂದಿ ಭಾಷಾ ಸಾಹಿತಿ ರಮೇಶ್ ಬೊಂಗಾಲೆ ಅಭಿಪ್ರಾಯಪಟ್ಟರು.

ನಗರದ ಕಲಾ ಕಾಲೇಜಿನಲ್ಲಿ ಹಿಂದಿ ವಿಭಾಗ ಆಯೋಜಿಸಿದ್ದ ‘ಹಿಂದಿ ಮೇ ರೋಝ್‌ಗಾರ್ ಕೀ ಸಂಭಾವನಯೇ’ ಮತ್ತು ವ್ಯಕ್ತಿತ್ವ ವಿಕಸನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಜ್ರ ಸ್ವಯಂಪ್ರಭೆ, ಗಾಜು ಪರಾವಲಂಬಿ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಜ್ರದ ಮಾದರಿಯಲ್ಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಹಿಂದಿ ವೈಜ್ಞಾನಿಕ ಭಾಷೆ, ಅತ್ಯಂತ ಶ್ರೀಮಂತ ಭಾಷೆಯೂ ಹೌದು. ದೇಶದ ಅತಿ ಹೆಚ್ಚು ರಾಜ್ಯಗಳು ಹಿಂದಿ ಮತ್ತು ಅದರ ಉಪ ಭಾಷೆಗಳನ್ನು ಮಾತನಾಡುವುದರಿಂದ ಒಂದು ದೇಶದ ಪರಿಕಲ್ಪನೆಗೆ ಇದು ಹೆಚ್ಚು ಸಹಕಾರಿಯಾಗಿದೆ. ಭಾಷೆಯನ್ನು ಕೇವಲ ಜ್ಞಾನದ ಸಂಗತಿಯಾಗಿ ನೋಡದೆ ದೇಶವನ್ನು ಮುನ್ನಡೆಸುವ ಮತ್ತು ಮುಖ್ಯವಾಗಿ ತಮ್ಮ ಆದಾಯದ ಮೂಲವನ್ನಾಗಿಯೂ ನೋಡಬೇಕಿದೆ ಎಂದು ಹಿಂದಿ ಭಾಷೆಯಲ್ಲಿನ ವೃತ್ತಿಪರ ಅವಕಾಶಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ. ಬಿ. ಇರ್ಷಾದ್ ಮಾತನಾಡಿ, ಇಂದು ಹಲವಾರು ಉದ್ಯೋಗಾವಕಾಶಗಳು ಹಿಂದಿಯ ಮೇಲೆ ಅವಲಂಬಿತವಾಗಿರುವುದನ್ನು ಕಾಣುತ್ತಿದ್ದೇವೆ. ಯುಪಿಎಸ್‌ಸಿ, ಬ್ಯಾಂಕಿಂಗ್ ಮುಂತಾದ ಪರೀಕ್ಷೆಗಳಲ್ಲಿ ಹಿಂದಿ ಭಾಷೆಯು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದು ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಹಿಂದಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ರಾಜು ಡಿ.ಎಸ್., ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ, ಹಿಂದಿ ಅಧ್ಯಯನ ಮತ್ತು ಪರೀಕ್ಷಾ ಮಂಡಳಿ ಅಧ್ಯಕ್ಷ ಡಾ. ಸುರೇಶ್ ಸಿ. ವಿಭಾಗದ ಮುಖ್ಯಸ್ಥೆ ಮಾಲತಿ ಬಿ.ಆರ್. ಇದ್ದರು.

ಹಾಸನದ ಕಲಾ ಕಾಲೇಜಿನಲ್ಲಿ ಹಿಂದಿ ವಿಭಾಗ ಆಯೋಜಿಸಿದ್ದ ‘ಹಿಂದಿ ಮೇ ರೋಝ್‌ಗಾರ್ ಕೀ ಸಂಭಾವನಯೇ’ ಮತ್ತು ವ್ಯಕ್ತಿತ್ವ ವಿಕಸನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಿಂದಿ ಭಾಷಾ ಸಾಹಿತಿ ರಮೇಶ್ ಬೊಂಗಾಲೆ ಉದ್ಘಾಟಿಸಿದರು.