ಕಠಿಣ ಶ್ರಮ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ

| Published : Aug 26 2024, 01:39 AM IST

ಕಠಿಣ ಶ್ರಮ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಚ್ಚಿಸುವವರು ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಂಡು ಕಠಿಣ ಪರಿಶ್ರಮ ಸತತ ಪ್ರಯತ್ನ ನಡೆಸಿದಾಗಲೇ ಯಶಸ್ಸು ನಮಗೆ ದೊರೆಯುತ್ತದೆ

ರೋಣ: ಸಾಧನೆ ಮಾಡಲು ತಲೆಯಲ್ಲಿ ಹುಚ್ಚು, ಎದೆಯಲ್ಲಿ ಕಿಚ್ಚು ಇರಬೇಕು. ಕಠಿಣ ಶ್ರಮ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ, ಅಂದಾಗ ನಾವು ಕಂಡ ಕನಸು ನನಸಾಗಿಸಲು ಸಾಧನೆಯ ಶಿಖರ ಮುಟ್ಟಲು ಸಾಧ್ಯ ಎಂದು ವ್ಯಕ್ತಿತ್ವ ವಿಕಸನ ಅಂತಾರಾಷ್ಟ್ರೀಯ ತರಬೇತುದಾರ ಮಹೇಶ ಮಾಶ್ಯಾಳ ಹೇಳಿದರು.

ಅವರು ಶನಿವಾರ ಪಟ್ಟಣದ ರಾಜೀವಗಾಂಧಿ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ ಎಸ್‌.ಆರ್‌.ಪಾಟೀಲ ಫೌಂಡೇಶನ ವತಿಯಿಂದ ಜರುಗಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮನುಷ್ಯನ ಹುಟ್ಟು ಸಹಜ, ಹುಟ್ಟಿದ ಪ್ರತಿಯೊಬ್ಬರಲ್ಲಿ ವಿಶೇಷ ಪ್ರತಿಭೆ ಇದ್ದೆ ಇರುತ್ತದೆ. ನಾವು ನಮ್ಮಲ್ಲಿ ಇರುವ ಪ್ರತಿಭೆ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಚ್ಚಿಸುವವರು ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಂಡು ಕಠಿಣ ಪರಿಶ್ರಮ ಸತತ ಪ್ರಯತ್ನ ನಡೆಸಿದಾಗಲೇ ಯಶಸ್ಸು ನಮಗೆ ದೊರೆಯುತ್ತದೆ. ಇದು ನಮ್ಮಿಂದ ಸಾಧ್ಯವಿಲ್ಲ ಎಂಬ ನಕಾರಾತ್ಮಕ ವಿಚಾರ ತೊಡೆದು ಹಾಕಿ, ನಾವು ಎಲ್ಲವನ್ನು ಸಾಧಿಸಬಲ್ಲೆವು ಎಂಬ ಮನಸ್ಥೈರ್ಯ ಬೆಳೆಸಿಕೊಂಡಾಗ ಸಾಧನೆ ಹಾದಿ ಸುಲಭ. ಈ ದಿಶೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವಲ್ಲಿ 2 ತಿಂಗಳ ಕಾಲ ಎಸ್.ಆರ್. ಫೌಂಡೇಶನ ಉಚಿತವಾಗಿ ತರಬೇತಿ ನೀಡುತ್ತಾ ಬಂದಿದ್ದ ಶ್ಲಾಘನಾರ್ಹವಾಗಿದೆ ಎಂದರು.

ಕೆಎಎಸ್ ಅಧಿಕಾರಿ ಅಶೋಕ ಮಿರ್ಜಿ ಮಾತನಾಡಿ, ಮುಂದೆ ಗುರಿ ಹಿಂದೆ ಗುರು ಇದ್ದಾಗ ಸಾಧನೆ ಸಾಧ್ಯವಾಗುತ್ತದೆ. ಆದರೆ ನಮ್ಮ ಪ್ರಯತ್ನ ನಾವು ಎಂದಿಗೂ ನಿಲ್ಲಿಸಬಾರದು, ಪ್ರತಿಯೊಂದು ಶ್ರಮದ ಹಿಂದೆ ತಕ್ಕ ಪ್ರತಿಫಲ ಇದ್ದೆ ಇರುತ್ತದೆ.ಬಡ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ತರಬೇತಿ ದೊರೆಯಬೇಕು ಎಂಬ ಉದ್ದೇಶದಿಂದ ಶಾಸಕ ಜಿ.ಎಸ್. ಪಾಟೀಲ ಈ ಕಾರ್ಯಕ್ರಮವನ್ನು ನಿಮ್ಮೆಲ್ಲರಿಗಾಗಿ ಆಯೋಜನೆ ಮಾಡಿದ್ದು ಅದರ ಸದುಪಯೋಗ ವಿದ್ಯಾರ್ಥಿಗಳು ಸಮರ್ಪಕ ರೀತಿಯಲ್ಲಿ ಪಡೆದುಕೊಂಡಾಗ ಕಾರ್ಯಕ್ರಮದ ಯಶಸ್ಸು ದೊರೆತಂತಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೊಳಿಸುವಲ್ಲಿ ಮುಂದಾಗಬೇಕು ಎಂದರು.

ಶಾಸಕ ಜಿ.ಎಸ್. ಪಾಟೀಲ, ಗುರುರಾಜ ಬುಲಬುಲೆ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿ..ಬಿ.ಸೋಮನಕಟ್ಟಿಮಠ, ಪುರಸಭೆ ಮಾಜಿ ಅಧ್ಯಕ್ಷ ವೆಂಕಣ್ಣ ಬಂಗಾರಿ, ಡಾ. ಐ.ಬಿ. ಕೊಟ್ಟೂರಶೆಟ್ಟರ, ವೈ.ಎನ್. ಪಾಪಣ್ಣವರ, ಶಿವಾನಂದ ಐಹೊಳಿ, ಎಂ.ಎಸ್. ಗೌಡರ, ಜಿ.ಪಿ. ಪಾಟೀಲ‌ ಸೇರಿದಂತೆ ಇತರರು ಉಪಸ್ಥಿತರಿದ್ದರು.‌ ಡಾ. ಶಶಿಕಲಾ ಬಾಣಿ ನಿರೂಪಿಸಿದರು. ಡಾ. ಬಿ.ಬಿ. ಕಾತರಕಿ ವಂದಿಸಿದರು.