ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಗೋಪಾಲಕೃಷ್ಣ ಭಟ್

| Published : Aug 06 2024, 12:31 AM IST

ಸಾರಾಂಶ

ಉಡುಪಿ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ರಾಜ್ಯ ಮಟ್ಟದ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ ಜಿ.ಎಂ. ಕ್ವಿಜ್ ಫೆಸ್ಟ್‌ ನಡೆಯಿತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಶಿಸ್ತು, ಕಠಿಣ ಪರಿಶ್ರಮ, ತ್ಯಾಗ ಮನೋಭಾವದಿಂದ ಜೀವನದಲ್ಲಿ ಯಶಸ್ಸನ್ನು ಪಡೆದು ಗುರಿ ಮುಟ್ಟಲು ಸಾಧ್ಯ. ಸುಲಭದನ್ನು ಮಾಡುವ ಬದಲು ಜೀವನಕ್ಕೆ ಒಳಿತನ್ನು ಉಂಟು ಮಾಡುವ ಕಾರ್ಯವು ಕ್ಲಿಷ್ಟವಾಗಿದ್ದರೂ ಮಾಡಬೇಕು. ಜಿ.ಎಂ. ಶಾಲೆ ಕಲಿಕೆಗೆ ಉತ್ತಮ ಸ್ಥಳವಾಗಿದ್ದು, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಿದೆ ಎಂದು ತ್ರಿಶಾ ಸಮೂಹ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹೇಳಿದರು.

ಅವರು ಇಲ್ಲಿನ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ ಜಿ.ಎಂ. ಕ್ವಿಜ್ ಫೆಸ್ಟ್‌ ಉದ್ಘಾಟಿಸಿ ಮಾತನಾಡಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಕೆ.ಎಂ.ಸಿ. ಮಣಿಪಾಲದ ವೈದ್ಯೆ ಡಾ. ಚೈತ್ರ ಆರ್. ರಾವ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದಿನನಿತ್ಯದ ಆಗುಹೋಗುಗಳ ಬಗ್ಗೆ ತಿಳಿಯಬೇಕು. ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ಕಲಿಕಾ ಹಾಗೂ ಐಕ್ಯತಾ ಮನೋಭಾವದ ಜೊತೆಗೆ ಆಲಿಸುವ ಗುಣಗಳನ್ನು ಬೆಳೆಸುತ್ತದೆ ಎಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ರಾಜ್ಯದ ವಿವಿಧ ಶಾಲೆಗಳಿಂದ ಆಗಮಿಸಿದ ಎಲ್ಲಾ ಸ್ಪರ್ಧಿಗಳಿಗೆ, ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.

ಗ್ರೇಕ್ಯಾಪ್ಸ್‌ನ ರಶ್ಮಿ ಫುರ್ಟಾಡೋ ಯಶಸ್ವಿಯಾಗಿ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿದರು. ರಾಜ್ಯದ ಸುಮಾರು ೨೫ ಶಾಲೆಯ ಸ್ಪರ್ಧಿಗಳು ಭಾಗವಹಿಸಿದ್ದು, ಶಿಕ್ಷಕರ ವಿಭಾಗದಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯ ಪ್ರಥಮ, ಸೈಂಟ್ ಥೆರೆಸಾ ಸ್ಕೂಲ್ ದ್ವಿತೀಯ, ವಿದ್ಯಾರ್ಥಿಗಳ ವಿಭಾಗದಲ್ಲಿ ಅತ್ತಾವರದ ಮಣಿಪಾಲ್ ಸ್ಕೂಲ್ ಪ್ರಥಮ, ಮಣಿಪಾಲ ಮಾಧವ ಕೃಪಾ ಸ್ಕೂಲ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶಾಲೆಯ ಪ್ರಾಂಶುಪಾಲ ಜಾರ್ಜ್ ಕುರಿಯನ್, ಜಿ.ಎಂ. ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲ ಪ್ರಣವ್ ಶೆಟ್ಟಿ, ಗ್ರೇಕ್ಯಾಪ್ಸ್‌ನ ನಿಹಾರಿಕಾ ಜೈನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗರಾಜ ಸೋಮಯಾಜಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.