ಬಸವಣ್ಣನವರು ಕಾಯಕವೇ ಕೈಲಾಸ ಎನ್ನುತ್ತ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಭಿತ್ತಿದರು

ಹಗರಿಬೊಮ್ಮನಹಳ್ಳಿ: ಬಸವಣ್ಣನವರು ಕಾಯಕವೇ ಕೈಲಾಸ ಎನ್ನುತ್ತ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಭಿತ್ತಿದರು ಎಂದು ಬಾಚಿಗೊಂಡನಹಳ್ಳಿಯ ತೋಂಟದಾರ್ಯ ಮಠದ ಶಿವಮಹಾಂತ ಸ್ವಾಮೀಜಿ ಹೇಳಿದರು.

ತಾಲೂಕಿನ ತಂಬ್ರಹಳ್ಳಿ ಉತ್ತರ ಭಾಗದ ಇತ್ತೀಚೆಗೆ ಸಿಎ ತೇರ್ಗಡೆಯಾದ ಅಕ್ಕಿ ನವೀನ್‌ಕುಮಾರ ಅವರನ್ನು ಸನ್ಮಾನಿಸಿ ಮಾತನಾಡಿದರು. ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದ ಫಲವಾಗಿ ನವೀನ್ ಅವರು ಸಿಎ ತೇರ್ಗಡೆಯಾಗಿದ್ದಾರೆ, ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಕಾಯಕ ಶ್ರದ್ಧೆ ಇರಬೇಕು. ಪ್ರತಿಯೊಬ್ಬರು ಬಡವರ ಕಷ್ಟಕ್ಕೆ ಸ್ಪಂದಿಸುವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಮಾನವ ಕಲ್ಯಾಣವೇ ಮುಖ್ಯ ಎಂದು ಸಾರಿದರು. ಅಂತರಂಗ ಬಹಿರಂಗ ಶುದ್ದಿಗಳ ಬಗ್ಗೆ ತಮ್ಮ ವಚನಗಳಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ಜಾತಿ ಜಾತಿಗಳ ಧರ್ಮ-ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷವನ್ನು ಕುರಿತು, ನೊಂದು ನುಡಿದ ಇವರ ವಚನಗಳು ವಿಶ್ವಕ್ಕೆ ದಿವ್ಯ ಸಂದೇಶವನ್ನು ನೀಡಿವೆ. ಸಮಾಜದಲ್ಲಿರುವ ಅಸಮಾನತೆಯನ್ನು ತೊಡೆದುಹಾಕಲು ಬಸವಣ್ಣನವರು ಚಳವಳಿಗಳ ಮೂಲಕ ಪ್ರಯತ್ನಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ನಿರಂತರವಾಗಿ ವಿದ್ಯಾರ್ಜನೆಯತ್ತ ಚಿತ್ತಹರಿಸಿದರೆ ಅವರ ಜೀವನ ಬಂಗಾರ ಆಗುತ್ತದೆ. ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ, ತಂದೆತಾಯಿಯರ ಪೋಷಣೆಯನ್ನು ಎಂದಿಗೂ ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ಎಬಿಟಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚನ್ನಬಸಪ್ಪ, ವಿಜಯನಗರ ಜಿಪಂ ಇಲಾಖೆಯ ಲೆಕ್ಕ ಸಹಾಯಕ ಮಹಾಂತೇಶ್ ಕೋರಿ, ಮಹೇಶ್, ಯುವ ಮುಖಂಡ ಜಗಳೂರು ದೊಡ್ಡಬಸಪ್ಪ, ಅಕ್ಕಿ ವೀರಣ್ಣ, ಶಿಕ್ಷಕ ಬಸವರಾಜ ಇದ್ದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಉತ್ತರ ಭಾಗದ ಸಿಎ ತೇರ್ಗಡೆಯಾದ ಅಕ್ಕಿ ನವೀನ್‌ಕುಮಾರ ಅವರನ್ನು ಬಾಚಿಗೊಂಡನಹಳ್ಳಿಯ ಶಿವಮಹಾಂತ ಸ್ವಾಮೀಜಿ ಸನ್ಮಾನಿಸಿದರು.