ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ

| Published : Jul 21 2025, 01:30 AM IST

ಸಾರಾಂಶ

ಯಾವುದೇ ಸಂಘ, ಸಂಸ್ಥೆ ಇರಲಿ ಅಲ್ಲಿ ಸಹನೆ, ತಾಳ್ಮೆ ಸಹಬಾಳ್ವೆ, ನೈತಿಕತೆ ಇದ್ದರೆ ಮಾತ್ರ ಅದು ಯಶಸ್ವಿಯಾಗಿ ಬೆಳೆಯಲು ಸಾಧ್ಯ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಯಾವುದೇ ಸಂಘ, ಸಂಸ್ಥೆ ಇರಲಿ ಅಲ್ಲಿ ಸಹನೆ, ತಾಳ್ಮೆ ಸಹಬಾಳ್ವೆ, ನೈತಿಕತೆ ಇದ್ದರೆ ಮಾತ್ರ ಅದು ಯಶಸ್ವಿಯಾಗಿ ಬೆಳೆಯಲು ಸಾಧ್ಯ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ನಗರ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಜತ ಮಹೋತ್ಸವ ಹಾಗೂ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ, ಆಶೀರ್ವಚನ ನೀಡಿ ಮಾತನಾಡಿದರು.ಈ ದೇಶ ಭವ್ಯ ಪರಂಪರೆ ಹೊಂದಿದ ನೆಲ, ಅನೇಕ ಮಹಾಪುರುಷರು ನೆಲೆಸಿ ಸುಸಂಸ್ಕೃತಿಯನ್ನು ಬಿಟ್ಟು ಹೋಗಿದ್ದಾರೆ. ಇಂತಹ ನೆಲದಲ್ಲೂ ಕೂಡ ಕೆಲ ಅಹಿತಕರ ಘಟನೆಗಳು ನಡೆಯುತ್ತಿವೆ, ಈ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸಗಳಾಗಬೇಕು ದೇಶದ ಏಕತೆಯ ಬಗ್ಗೆ ಚಿಂತಿಸಿ ನಮ್ಮ ಭವ್ಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಬೇಕು ಎಂದರು.

ಯಾವುದೇ ಸಂಘಟನೆ ಇರಲಿ ಅಲ್ಲಿ ಜವಾಬ್ದಾರಿ ಹೊತ್ತವರು, ಏನು ಮಾಡಿಲ್ಲ ಎನ್ನುವ ಭಾವನೆಯನ್ನು ಇಟ್ಟುಕೊಂಡು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಆಗ ಮಾತ್ರ ಸಂಘ ಬೆಳೆಯಲು ಸಾಧ್ಯ, ಸಾರ್ವಜನಿಕ ಕ್ಷೇತ್ರದಲ್ಲಿ ಒಗ್ಗೂಡಿ ಕೆಲಸ ಮಾಡಬೇಕು ಎಂದರು.ಕಳೆದ ೨೫ ವರ್ಷಗಳಿಂದ ಮೌಲ್ಯಯುತ, ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕಗಳನ್ನು ಮಾಡಿಕೊಂಡಿರುವುದು ಶ್ಲಾಘನೀಯವಾದದ್ದು, ಮುಂದಿನ ದಿನಗಳಲ್ಲೂ ಈ ಸಂಘದಿಂದ ಒಳ್ಳೆಯ ಕೆಲಸಗಳಾಗಲಿ, ಮಾನವ ಜನ್ಮ ಶಾಶ್ವತವಲ್ಲ ಆದರೆ ಸಂಘ ಶಾಶ್ವತ ಮುಂದೆ ಬರುವವರು ಇಂತಹ ಒಳ್ಳೆಯ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಿ ಸುವರ್ಣ ಮಹೋತ್ಸವ ಅಚರಿಸಲಿ ಇತರ ಸಂಘಗಳಿಗೆ ಮಾದರಿಯಾಗಿರಲಿ ಎಂದು ಆಶೀರ್ವದಿಸಿದರು.ಭರವಸೆ, ಬೆಳಕು ಮೂಡಿಸುವ ಕೆಲಸ ಮಾಡಬೇಕು ಸಮಾರೋಪ ನುಡಿಯನ್ನು ಆಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮಾತನಾಡಿ, ಸಂಘದಲ್ಲಿ ಭರವಸೆ, ಬೆಳಕು ಮೂಡಿಸುವ ಕೆಲಸ ಮಾಡಬೇಕು, ಈ ನಿಟ್ಟಿನಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮುನ್ನಡೆಯತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ವೀರಶೈವ ಲಿಂಗಾಯತ ಧರ್ಮದಲ್ಲಿ ಉಪಪಂಗಡಗಳನ್ನು ಬಿಟ್ಟು ಕೆಲಸ ಮಾಡಬಾರದು, ಬೇದಭಾವಗಳನ್ನು ಮಾಡದೇ ಎಲ್ಲರು ಒಟ್ಟಾಗಿ ಹೋಗುವಂತಾಗಬೇಕು ಆಗ ಮಾತ್ರ ಸಮಾಜ ಉಳಿಯಲು ಸಾಧ್ಯ, ಈ ನಿಟ್ಟಿನಲ್ಲಿ ನಮ್ಮ ಮಠ ಮಾನ್ಯಗಳು ಮಾರ್ಗದರ್ಶನ ನೀಡುತ್ತಿದ್ದು ಅವುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.೧೨ನೇ ಶತಮಾನದ ಬಸವಾದಿ ಶಿವಶರಣರು ಹೇಳಿದಂತೆ ಇವನ್ಯಾರವ ಎಂದೆನಿಸದೇ ಇವ ನಮ್ಮವ ಎನ್ನುತ್ತಾ ಎಲ್ಲರನ್ನು ಒಟ್ಟಗೂಡಿಸಿಕೊಂಡು ಹೋಗಬೇಕು. ಸಂಘ ಕಟ್ಟುವುದು ಸುಲಭ ಆದರೆ ಅದನ್ನು ಬೆಳೆಸುವುದು ದೊಡ್ಡ ಸವಾಲು, ಅವಕಾಶಗಳು ಸಿಕ್ಕಾಗ ಅದನ್ನು ಒಳ್ಳೆಯ ಸೇವಾ ಮನೋಭಾವನೆಯಿಂದ ನಿರ್ದಿಷ್ಟ ಗುರಿ ಇಟ್ಟುಕೊಂಡು ಮುಂದುವರಿದರೆ ಯಶಸ್ಸು ಖಂಡಿತ ಸಿಗಲಿದೆ, ಆಗ ಸಮಾಜ ಕಟ್ಟುವ ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು.

ಸಮಾಜದಲ್ಲಿ ಮಠಗಳು ಇಲ್ಲದಿದ್ದರೆ ಸಮುದಾಯ ಬಹಳ ಕಷ್ಟಪಡಬೇಕಿತ್ತು, ಅಕ್ಷರ, ಜ್ಞಾನ, ಅನ್ನ ದಾಸೋಹದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಸುತ್ತೂರು, ಸಿದ್ದಗಂಗಾ ಮಠ ಸೇರಿದಂತೆ ಅನೇಕ ಮಠಗಳು ಸಮಾಜದ ಏಳಿಗೆಗೆ ಶ್ರಮಿಸುತ್ತಿವೆ ಎಂದರು.ಸಮಾರಂಭವನ್ನು ಶಾಸಕ ಎಚ್.ಎಂ. ಗಣೇಶ್‌ಪ್ರಸಾದ್ ಉದ್ಘಾಟಿಸಿ ಮಾತನಾಡಿ, ಒಳ್ಳೆಯ ಕೆಲಸಗಳಿಗೆ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದರು.ಪ್ರತಿಭಾ ಪುರಸ್ಕಾರ ನೆರವೇರಿಸಿದ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಸಮಾಜದ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಈ ನಿಟ್ಟಿನಲ್ಲಿ ಸಂಘ ಜಾಗೃತಿ ಮೂಡಿಸುವ, ಲಿಂಗಧಾರಣೆ ಮಾಡಿಸುವ ಕಾರ್ಯವನ್ನು ಪ್ರತಿ ಗ್ರಾಮದಲ್ಲೂ ಮಾಡಬೇಕು ಎಂದರು.ಮರಿಯಾಲದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ನಗರದ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಆಶೀರ್ವಚನ ನೀಡಿದರು.ರಾಜ್ಯ ಸಂಘದ ಅಧ್ಯಕ್ಷರಾದ ಸೋಮಶೇಖರಯ್ಯ ಬಹುಮಾನ ವಿತರಣೆ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಕೌಶಲಾಭಿವೃದ್ದಿಗಾಗಿ ವಿವಿಧ ಯೋಜನೆಗಳನ್ನು ಸಿದ್ದಪಡಿಸಿ ಕಾರ್ಯಗತಗೊಳಿಸಲಾಗುವುದು. ಸಮುದಾಯದವರ ಕುರಿತಂತೆ ಮಾಹಿತಿ ಕೋಶವೊಂದನ್ನು ನಿರ್ಮಿಸುವ ಇರಾದೆಯನ್ನು ಹೊಂದಲಾಗಿದೆ ಎಂದರು.ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಬಸಪ್ಪ ಪ್ರಾಸ್ತಾವಿಸಿದರು. ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾದ ಎಂ. ಗೌರಿಶಂಕರ, ಬಿ.ಎಲ್. ಮುದ್ದುಬಸವಣ್ಣ, ಮೂರು ಸಂಘಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.