ಸಾರಾಂಶ
ಜಿಎಂಐಟಿಯಲ್ಲಿ ದಿಶಾ-2ಕೆ 25, ಎಂಬಿಎ ಮಕ್ಕಳ ಸ್ವಾಗತ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ದಾವಣಗೆರೆಸೋಲು ಕಂಡಾಗ ಕುಗ್ಗದೇ ಧೈರ್ಯವಾಗಿ ಗೆಲುವು ಸಾಧಿಸುವುದೇ ನಿಜವಾದ ಯಶಸ್ಸು ಎಂದು ಮುದ್ದೇನಹಳ್ಳಿ ವಿಟಿಯು ಸಿಪಿಜಿಎಸ್ ಸಹ ಪ್ರಾಧ್ಯಾಪಕ ಬಿನೋಯ್ ಮ್ಯಾಥ್ಯೂ ಹೇಳಿದರು.
ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದಿಂದ ಮಹಾವಿದ್ಯಾಲಯದ ಆವರಣದಲ್ಲಿನ ಎಂಬಿಎ ಸಭಾಂಗಣದಲ್ಲಿ ದಿಶಾ-2ಕೆ 25 ಫೋರಂ ಸಮಾರಂಭ ಹಾಗೂ 2024-26ನೇ ಸಾಲಿನ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಳೆ, ಗಾಳಿ ಲೆಕ್ಕಿಸದೆ ಹದ್ದು ತನ್ನ ಆಹಾರ ಹುಡುಕಿಕೊಂಡು ಬದುಕು ಸಾಗಿಸುವುದು ಎಂಬುದಾಗಿ ಹದ್ದಿನ ಯಶಸ್ವಿ ಬದುಕನ್ನು ಉದಾಹರಣೆಯಾಗಿ ನೀಡುತ್ತಾ, ನಿಮ್ಮ ಬದುಕಿನಲ್ಲಿ ಜೀವನದಲ್ಲಿ ಬರುವ ಸವಾಲುಗಳನ್ನೇ ಅನುಭವವಾಗಿ ಸ್ವೀಕರಿಸುತ್ತಾ ಮುಂದೆ ಸಾಗಿದರೆ ಗುರಿ ಸಾಧನೆ ಸಾಧ್ಯ. ಜೀವನದಲ್ಲಿ ಮೊದಲು ಗುರಿ ಇರಬೇಕು. ಆಗ ಸಾಧನೆ ಮಾಡಬಲ್ಲೆವು. ಜೀವನ ಸಾಧನೆಗೆ ಸಾಕಷ್ಟು ಮಾರ್ಗಗಳು, ಬದುಕು ಕಟ್ಟಿಕೊಳ್ಳಲು ಸಾಕಷ್ಟು ಉದ್ಯೋಗ ಅವಕಾಶ ಉಂಟು. ಅವನ್ನು ಪಡೆಯುವ ಶಕ್ತಿ ನಿಮ್ಮ ಕೈಯಲ್ಲಿದೆ. ಅದೆಲ್ಲಾ ನಿಮ್ಮ ಶ್ರಮ, ನಿಮ್ಮ ಮೇಲೆಯೇ ನಂಬಿಕೆ ಮುಖ್ಯ ಎಂದು ಸಲಹೆ ನೀಡಿದರು.
ಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ ಮಾತನಾಡಿ, ಏನು ಮಾಡಬೇಕು, ಯಾವುದು ಮಾಡಬಾರದು, ಏನು ಮಾಡುತ್ತಿದ್ದೇವೆ ಎಂಬುದರ ಅರಿವು ನಿಮಗಿರಬೇಕು. ಆಗ ವಿದ್ಯಾಭ್ಯಾಸದಲ್ಲಾಗಲೀ, ಉಜ್ವಲ ಭವಿಷ್ಯ ಕಟ್ಟಿಕೊಳ್ಳುವಲ್ಲಿ ಯಶಸ್ವಿ ಕಾಣಬಹುದು. ನಮ್ಮ ಗುರಿ ಸಾಧನೆ ಕಡೆ ಇದ್ದಾಗ ಯಾವುದೇ ಕಷ್ಟ, ಕೆಡಕು ನಮ್ಮ ಯಶಸ್ವಿಗೆ ಕಾರಣವಾಗಲ್ಲ ಎಂದು ಹೇಳಿದರು.ಎಂಬಿಎ ವಿಭಾಗದ ನಿರ್ದೇಶಕ ಡಾ. ಬಿ. ಬಕ್ಕಪ್ಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಕಲಿಕೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ, ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕೆಂದರು.
ಕಾರ್ಯಕ್ರಮದಲ್ಲಿ ಜಿಎಂಐಟಿ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್.ಬಸವರಾಜು, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್. ತೇಜಸ್ವಿ ಕಟ್ಟಿಮನಿ ಸೇರಿದಂತೆ ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.