ಸಾರಾಂಶ
ಯಲ್ಲಾಪುರ:
ಯಾವುದೇ ವ್ಯಕ್ತಿ ಕಠಿಣ ಪರಿಶ್ರಮ, ಬದ್ಧತೆಯಿಂದ ಕಾರ್ಯ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ. ಆ ವೇಳೆ ಎದುರಾಗುವ ಸವಾಲನ್ನು ಮೆಟ್ಟಿನಿಂತು ಮುನ್ನಡೆಯಬೇಕು. ಅಂತಹ ವ್ಯಕ್ತಿತ್ವವನ್ನು ನಾವು ರೂಪಿಸಿಕೊಳ್ಳಬೇಕು ಎಂದು ಉದ್ಯಮಿ ಡಾ. ಆನಂದ ಸಂಕೇಶ್ವರ ಹೇಳಿದರು.ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ, ಮೀಡಿಯಾ ಸ್ಕೂಲಿನ ಯೂಟ್ಯೂಬ್ ಚಾನಲ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮುನ್ನಡೆಸುತ್ತಿರುವ ಹರಿಪ್ರಕಾಶ ಕೋಣೇಮನೆ, ಸಂಸ್ಥೆಗೆ ಪುನರುಜ್ಜೀವದ ಕಾಯಕಲ್ಪ ನೀಡಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರಭರಿತ ಶಿಕ್ಷಣ ನೀಡುತ್ತಿದ್ದಾರೆ ಎಂದ ಅವರು, ಮೊಬೈಲ್ ಬಳಕೆಯೇ ಒಂದು ಟ್ರೆಂಡ್ ಆಗಿ ಬೆಳೆಯುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ವಿಶ್ವದರ್ಶನದಲ್ಲಿ ಶಿಸ್ತುಬದ್ಧ, ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ ಎಂದರು.ಪತ್ರಿಕೆಗಳಿಗೆ ಜಾಹೀರಾತೇ ಜೀವಾಳವಾಗಿದೆ ಎಂಬುದನ್ನು ಎಲ್ಲರೂ ಬಲ್ಲರು. ಆದರೆ, ಇತ್ತೀಚಿಗೆ ಓದುಗರ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂಬ ಕೆಲವರ ಅಭಿಪ್ರಾಯ ಸರಿಯಾದುದಲ್ಲ ಎಂದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮಾತನಾಡಿ, ಇಂದು ಹಣವೇ ಸರ್ವಸ್ವವೆಂಬ ಮನೋಭಾವ ಬೆಳೆಸಿಕೊಳ್ಳಲಾಗುತ್ತಿದೆ. ಹಣದಿಂದ ರಾಜಕಾರಣಿ, ಪತ್ರಕರ್ತರ ಸೇರಿದಂತೆ ಯಾರನ್ನು ಬೇಕಾದರೂ ಖರೀದಿಸಬಹುದೆಂಬುದನ್ನು ರುಜುವಾತುಪಡಿಸುತ್ತಿದ್ದೇವೆ ಎಂದು ಹೇಳಿದರು.ಮಕ್ಕಳಿಗೆ ಹಣವಿಲ್ಲದೇ ಬದುಕು ರೂಪಿಸಿಕೊಳ್ಳುವ ಕಲೆ ಕಲಿಸಬೇಕೆಂದ ಅವರು, ದೂರದರ್ಶನ ಚಾನಲ್‌ಗಳಿಂದಾಗಿ ಪತ್ರಿಕೆಗಳ ಪ್ರಸಾರಕ್ಕೆ ಯಾವುದೇ ದುಷ್ಪರಿಣಾಮ ಉಂಟಾಗಿಲ್ಲ. ಆದರೂ ಪತ್ರಿಕೋದ್ಯಮ ಮತ್ತು ಪತ್ರಿಕೆಗಳ ಉಳಿವಿಗಾಗಿ ಸಂಘಟಿತ ಪ್ರಯತ್ನ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಮಾತನಾಡಿ, ಪ್ರಶಿಕ್ಷಣಾರ್ಥಿಗಳಿಗೆ ಪದವಿಯೊಂದಿಗೆ ಕೌಶಲ್ಯಾಭಿವೃದ್ಧಿಯ ಶಿಕ್ಷಣ ನೀಡುವುದು ನಮ್ಮ ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಪ್ರಾರಂಭಿಸುವ ಇಚ್ಛೆ ನಮಗಿದೆ ಎಂದು ಹೇಳಿದರು. ಪ್ರಾಂಶುಪಾಲ ನಾಗರಾಜ ಇಳೇಗುಂಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೊದಲ ವರ್ಷದ ೨೨ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ವೇಳೆ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಿ.ಕೆ. ಗಾಂವ್ಕರ್, ಶಿಕ್ಷಕರಾದ ಶ್ಯಾಮಲಾ ಕೆರೆಗದ್ದೆ, ಪ್ರೇಮಾ ಗಾಂವ್ಕರ, ಪ್ರಾಚಾರ್ಯ ಡಾ. ಎಸ್.ಎಲ್. ಭಟ್ಟ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಆನಂದ ಸಂಕೇಶ್ವರ, ರವೀಂದ್ರ ಭಟ್ಟ ಐನಕೈ ಹಾಗೂ ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ ಮತ್ತು ಪ್ರಾಚಾರ್ಯ ನಾಗರಾಜ ಇಳೇಗುಂಡಿ ಅವರನ್ನು ಗೌರವಿಸಲಾಯಿತು.