ಸಾರಾಂಶ
ಸಾಧನೆ । ಆಸ್ಪತ್ರೆಯ ಮೂಳೆ ತಜ್ಞ ಮಾಹಿತಿ । ಸಾವಿರಕ್ಕೂ ಹೆಚ್ಚು ಮೊಣಕಾಲು, ಚಪ್ಪೆ ಕೀಲು ಬದಲಾವಣೆ ಆಪರೇಷನ್
ಕನ್ನಡಪ್ರಭ ವಾರ್ತೆ ಶಿವಮೊಗ್ಗಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು 1,000ಕ್ಕೂ ಹೆಚ್ಚು ಮೊಣಕಾಲು ಮತ್ತು ಚಪ್ಪೆ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದೆ ಎಂದು ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ.ಚೇತನ್ ಮಠದ್ ಹೇಳಿದರು.
ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, 2012ರಲ್ಲಿ ತನ್ನ ಮೂಳೆ ಶಸ್ತ್ರಚಿಕಿತ್ಸಾ ವಿಭಾಗವನ್ನು (ಆರ್ಥೋಪೆಡಿಕ್) ಪ್ರಾರಂಭಿಸಿದಾಗಿನಿಂದ,ಆಸ್ಪತ್ರೆಯು ಕಳೆದ 13 ವರ್ಷಗಳಲ್ಲಿ ಈ ಮಹತ್ವದ ಅಂಕಿಯನ್ನು ತಲುಪಿದೆ ಎಂದರು.ನಮ್ಮ ಮೂಳೆಚಿಕಿತ್ಸಾ ತಂಡವು ಮೊಣಕಾಲು ಮತ್ತು ಚಪ್ಪೆಗೆ ಸಂಬಂಧಿಸಿದ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇದರಲ್ಲಿ 200 ಕ್ಕೂ ಹೆಚ್ಚು ಮೊಣಕಾಲು ಆರ್ತ್ರೋಸ್ಕೋಪಿಗಳು ಸೇರಿವೆ. ಇದು ಹರಿದ ಕಾರ್ಟಿಲೇಜ್ ಅಥವಾ ಅಸ್ಥಿರಜ್ಜುಗಳಂತಹ ಸಮಸ್ಯೆಗಳನ್ನು ಸರಿಪಡಿಸಲು ಸಣ್ಣ ಛೇದನದೊಂದಿಗೆ ಕ್ಯಾಮೆರಾವನ್ನು ಬಳಸಿಕೊಂಡು ಮಾಡುವ ಕನಿಷ್ಠ ಆಕ್ರಮಣಕಾರಿ (ಮಿನಿಮಮ್ ಇನ್‌ವ್ಯಾಸಿವ್) ಚಿಕಿತ್ಸೆಯಾಗಿದೆ ಎಂದು ತಿಳಿಸಿದರು.
ತಮ್ಮ ತಂಡವು ಸಂಕೀರ್ಣವಾದ ಚಪ್ಪೆ ಶಸ್ತ್ರಚಿಕಿತ್ಸೆಗಳನ್ನು ಸಹ ಮಾಡುತ್ತಿದೆ ಎಂದ ಅವರು, ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ನಾವು ಸಂಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿದ್ದೇವೆ. ಈಗಾಗಲೇ ಸುಮಾರು 50 ಈ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.ಸುಮಾರು 90 ವರ್ಷ ವಯೋಮಾನದ ವ್ಯಕ್ತಿಯೊಬ್ಬರು ನಮ್ಮಲ್ಲಿ ಸಂಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈಗ ಅವರು ಬಹುತೇಕ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ. ಇದೇ ರೀತಿಯ ಶಸ್ತ್ರಚಿಕಿತ್ಸೆಗಳ ಮೂಲಕ 80 ರ ಆಸುಪಾಸಿನಲ್ಲಿರುವ ಹಲವಾರು ರೋಗಿಗಳಿಗೆ ನಾವು ಯಶಸ್ವಿ ಚಿಕಿತ್ಸೆ ನೀಡುವುದರ ಮೂಲಕ ಅವರು ಸುಲಭವಾಗಿ ನಡೆದಾಡುವಂತೆ ಮಾಡಿದ್ದೇವೆ ಎಂದರು.
ಕೋವಿಡ್ ನಂತರ ಚಪ್ಪೆ ಬದಲಿ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿರುವದನ್ನು ನಾವು ಗಮನಿಸಿದ್ದೇವೆ. ಈ ಪ್ರಕರಣಗಳಲ್ಲಿ ಗಣನೀಯ ಸಂಖ್ಯೆಯು ಅವಾಸ್ಕುಲರ್ ನೆಕ್ರೋಸಿಸ್ ಕಾರಣದಿಂದಾಗಿವೆ. ಇದು ರಕ್ತದ ಹರಿವು ಕಡಿಮೆಯಾಗುವುದರಿಂದ ಮೂಳೆ ಅಂಗಾಂಶವು ಸಾಯುತ್ತವೆ. ಇದು ಕೋವಿಡ್-19 ಚಿಕಿತ್ಸೆಯ ಸಮಯದಲ್ಲಿ ಸ್ಟೀರಾಯ್ಡ್‌ಗಳ ಬಳಕೆಯು ಇದಕ್ಕೆ ಒಂದು ಕಾರಣವಾಗಿರಬಹುದು ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಚಕ್ರವರ್ತಿ ಸಂಡೂರು, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗಿಸ್ ಪಿ. ಜಾನ್, ಮಾರ್ಕೇಟಿಂಗ್ ಮುಖ್ಯಸ್ಥರು ಎಸ್.ವಿ.ರಾಜಾಸಿಂಗ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಎಸ್.ಎನ್. ಶೈಲೇಶ್ ಇತರ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.