ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ಉದರ ಶಸ್ತ್ರಚಿಕಿತ್ಸೆಯಲ್ಲಿನ ಅತ್ಯಂತ ಸಂಕೀರ್ಣ ಕೀಹೋಲ್ ಮತ್ತು ಅಧುನಿಕ ರೊಬೊಟ್ ತಂತ್ರಜ್ಞಾನದ ಸಂಯೋಜನೆಯ ಮೂಲಕ 58 ವರ್ಷದ ಮಹಿಳೆಯ ಮೇದೋಜೀರಕ ಗ್ರಂಥಿ ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ಉದರ ಶಸ್ತ್ರಚಿಕಿತ್ಸೆಯಲ್ಲಿನ ಅತ್ಯಂತ ಸಂಕೀರ್ಣ ಕೀಹೋಲ್ ಮತ್ತು ಅಧುನಿಕ ರೊಬೊಟ್ ತಂತ್ರಜ್ಞಾನದ ಸಂಯೋಜನೆಯ ಮೂಲಕ 58 ವರ್ಷದ ಮಹಿಳೆಯ ಮೇದೋಜೀರಕ ಗ್ರಂಥಿ ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ.ರೋಗಿಯು ಕಣ್ಣು ಮತ್ತು ಚರ್ಮ ಹಳದಿಯಾಗಿ, ಕಾಮಾಲೆ ರೋಗದ ದೂರಿನೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಪರಿಶೀಲನೆಯ ವೇಳೆ ಪಿತ್ತರಸ ಮತ್ತು ಮೇದೋಜೀರಕ ನಾಳಗಳು ಸಣ್ಣ ಕರುಳಿಗೆ ತೆರೆದುಕೊಳ್ಳುವ ಸ್ಥಳದಲ್ಲಿ ಕ್ಯಾನ್ಸರ್ ಗಡ್ಡೆ ಕಂಡುಬಂದಿತು. ಯಕೃತ್ತಿಗೆ ರಕ್ತ ಪೂರೈಸುವ ಅಪಧಮನಿಗಳಲ್ಲೊಂದು ಗಡ್ಡೆಯ ಸಮೀಪದಲ್ಲಿ ಹಾದು ಹೋಗಿತ್ತು. ಕೆಲವೇ ಜನರಲ್ಲಿ ಕಂಡುಬರುವ ಈ ವ್ಯತ್ಯಾಸವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವ ಮತ್ತು ಗಾಯದ ಅಪಾಯ ಹೆಚ್ಚಿಸುವ ಸಾಧ್ಯತೆ ಇತ್ತು.ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು, ತಂಡವು ‘ವಿಪಲ್ಸ್ ಶಸ್ತ್ರಚಿಕಿತ್ಸೆ’ ಎಂದೇ ಹೆಚ್ಚು ಪರಿಚಿತವಾಗಿರುವ ಪ್ಯಾಂಕ್ರಿಯಾಟಿಕೊಡ್ಯು ಡೆನೆಕ್ಟಮಿಯನ್ನು ನಡೆಸಿತು. ಹೊಟ್ಟೆಯಲ್ಲಿ ಸಣ್ಣ ರಂದ್ರಗಳನ್ನು ಮಾಡಿ ಗಡ್ಡೆಯನ್ನು ಕತ್ತರಿಸಿ ತೆಗೆದುಹಾಕಲಾಯಿತು ಮತ್ತು ರೊಬೊಟಿಕ್ ತಂತ್ರಜ್ಞಾನದ ಮೂಲಕ ಜೀರ್ಣಾಂಗವನ್ನು ಜಾಗರೂಕತೆಯಿಂದ ಜೋಡಿಸಲಾಯಿತು. ರೋಗಿಯು ಚೇತರಿಸಿಕೊಂಡಿದ್ದು ಕೇವಲ 7 ದಿನಗಳಲ್ಲಿ ಅವರನ್ನು ಮನೆಗೆ ತೆರಳಿದ್ದಾರೆ.ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ನವಾಜ್ ಉಸ್ಮಾನ್, ಡಾ. ಪ್ರೀತಿ ಎಸ್. ಶೆಟ್ಟಿ, ಡಾ. ಅಖಿಲ್ ಪಾಲೋಡ್ ಹಾಗೂ ಡಾ. ಅನಂತಕೃಷ್ಣನ್ ಬಾಲಕೃಷ್ಣನ್ ಸೇರಿದಂತೆ ಅರಿವಳಿಕೆ ತಜ್ಞರು ಸಹಕರಿಸಿದ್ದರು.ಈ ಯಶಸ್ವಿ ಶಸ್ತ್ರಚಿಕಿತ್ಸೆಯ ಬಗ್ಗೆ ಸರ್ಜಿಕಲ್ ಆಂಕಾಲಜಿ ವಿಭಾಗದ ಡಾ. ನವೀನಾ ಎ. ಎನ್. ಕುಮಾರ್ ‘ಕೀಹೋಲ್ ಮೂಲಕ ಗಡ್ಡೆ ತೆಗೆಯುವುದನ್ನು ರೊಬೊಟಿಕ್ ಸಂಯೋಜನೆ ಮೂಲಕ ಸುರಕ್ಷಿತವಾಗಿ ಹಾಗೂ ಹೆಚ್ಚಿನ ನಿಖರತೆಯಿಂದ ಪೂರ್ಣಗೊಳಿಸಲು ಸಾಧ್ಯವಾಯಿತು. ರೋಗಿಗಳನ್ನು ದೂರದ ನಗರಗಳಿಗೆ ಕಳುಹಿಸುವ ಬದಲಿಗೆ, ಇಂತಹ ಅತ್ಯಾಧುನಿಕ, ಕನಿಷ್ಠ ಆಕ್ರಮಣಕಾರಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಮನೆಯ ಸಮೀಪದಲ್ಲೇ ಒದಗಿಸಲು ಸಾಧ್ಯವಾಗಿರುವುದು ಈ ಪ್ರದೇಶದ ಜನರಿಗೆ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.